‘ಮೀಸಲಾತಿ’ ಮಸೂದೆ ಮಂಡನೆಗೆ ಮಹಿಳೆಯರ ಸಂತಸ

Published on

ಮೈಸೂರು: ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆ ಮಂಡಿಸಿ ಅದಕ್ಕೆ ಒಪ್ಪಿಗೆ ದೊರೆತಿರುವುದು ಮಹಿಳೆಯರಲ್ಲಿ ಸಂತಸ ತಂದಿದೆ ಎಂದು ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಸಂಸ್ಥಾಪಕ ಅಧ್ಯಕ್ಷೆ ಎಚ್.ಎಲ್. ಯಮುನಾ ತಿಳಿಸಿದರು.
ರಾಜಕೀಯ ವಿಷಯದಲ್ಲಿ ಮಹಿಳೆಯರಿಗೆ ತಾರತಮ್ಯ ಮಾಡಲಾಗುತ್ತಿತ್ತು. ಇದರಿಂದ ಆಡಳಿತದಲ್ಲಿ ಭಾಗಿಯಾಗುವುದರಿಂದ ಅವಕಾಶ ವಂಚಿತರಾಗಬೇಕಿತ್ತು. ಈಗ ಮೀಸಲಾತಿ ತಂದಿರುವುದರಿಂದ ರಾಜಕೀಯ ಆಸಕ್ತಿ ಇರುವವರಿಗೆ ಅವಕಾಶ ನೀಡಿದಂತಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹೀಗಾಗಿ ಈ ಕುರಿತಂತೆ ನಮ್ಮ ಸಂಸ್ಥೆ ಸಹ ಮಹಿಳೆಯರಿಗೆ ಮೀಸಲಾತಿ ನೀಡುವಂತೆ ಒತ್ತಾಯ ಮಾಡಿತ್ತು. ಇದೀಗ ಕೇಂದ್ರ ಸರ್ಕಾರ ಮೀಸಲಾತಿ ನೀಡುವ ಮಸೂದೆಯನ್ನು ನೂತನ ಸಂಸತ್‌ನಲ್ಲಿ ಮಂಡಿಸಿ ಒಪ್ಪಿಗೆ ಪಡೆದಿರುವುದು ಸ್ವಾಗತಾರ್ಹ ನಿರ್ಧಾರ ಎಂದರು.
ಹಿರಿಯ ಸಹಕಾರಿ ಸುಶೀಲಾ ನಂಜಪ್ಪ ಮಾತನಾಡಿ, ಹಲವಾರು ವರ್ಷದಿಂದ ರಾಜಕೀಯವಾಗಿ ದುಡಿಯುತ್ತಿದ್ದರೂ ಅಧಿಕಾರ ಮಾತ್ರ ಇಲ್ಲವಾಗಿತ್ತು. ಈಗ ಶೇ.33ರಷ್ಟು ಮೀಸಲಾತಿ ನೀಡಲು ಸರ್ಕಾರ ಮುಂದಾಗಿರುವುದು ಸಂತಸ ತರಿಸಿದೆ. ರಾಜಕೀಯ ಪಕ್ಷಗಳು ಅರ್ಹ ಮಹಿಳೆಯರಿಗೆ ರಾಜಕೀಯ ಸ್ಥಾನಮಾನ ದೊರೆಯಲು ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net