ಮೀಸಲಾತಿ ನಿಗದಿಪಡಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ

CMC
Published on

ಚಿತ್ರದುರ್ಗ: ನಗರಸಭೆ, ಪುರಸಭೆ, ಪಪಂಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲು ವಿಳಂಬ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಜಿಲ್ಲೆಯಲ್ಲಿನ ಸ್ಥಳೀಯ ಸಂಸ್ಥೆಗಳ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು.

ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಸದಸ್ಯರು ಸರ್ಕಾರ ಪ್ರತಿ ಬಾರಿಯೂ ನಿರ್ಲಕ್ಷೃ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿ, ಧಿಕ್ಕಾರ ಕೂಗಿದರು. ಮೀಸಲಾತಿ ನಿಗದಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರು, ಸಿಎಂ, ಪೌರಾಡಳಿತ ಸಚಿವರಿಗೆ ಮನವಿ ರವಾನಿಸಿದರು.

ಮೀಸಲಾತಿ ಅವಧಿ ಮುಕ್ತಾಯವಾಗಿದ್ದರೂ ಹೊಸ ಮೀಸಲು ಪ್ರಕಟಿಸದೆ, ಅಧಿಕಾರಿಗಳಿಗೆ ಉಸ್ತುವಾರಿ ವಹಿಸಲಾಗಿದೆ. ಈವರೆಗೆ ಒಂದೂ ಸಾಮಾನ್ಯ ಸಭೆ ಕರೆದಿಲ್ಲ. ಹೀಗಾಗಿ ವಾರ್ಡ್‌ಗಳಲ್ಲಿ ಸಮಸ್ಯೆಗಳು ಬಗೆಹರಿಯದೆ, ಹೆಚ್ಚಾಗುತ್ತಿವೆ. ಒಕ್ಕೂಟದ ಮೂಲಕ ನಮ್ಮ ಹಕ್ಕು ಕೇಳುತ್ತಿದ್ದು, ತಿಂಗಳೊಳಗೆ ಮೀಸಲಾತಿ ಪ್ರಕಟಿಸದಿದ್ದರೆ, ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಸದಸ್ಯರು ಎಚ್ಚರಿಕೆ ನೀಡಿದರು.

ಹೊಳಲ್ಕೆರೆ ಪುರಸಭೆ ಸದಸ್ಯ ರಮೇಶ್ ಮಾತನಾಡಿ, ಸದಸ್ಯರೆಲ್ಲರೂ ತೀರ್ಮಾನಿಸಿ, ಒಕ್ಕೂಟ ರಚಿಸಿಕೊಂಡು ಹೋರಾಟಕ್ಕೆ ಧುಮುಕ್ಕಿದ್ದೇವೆ. ಇದು ಆರಂಭವಾಗಿದ್ದು, ರಾಜ್ಯಾದ್ಯಂತ ಮುಂದುವರೆಯಲಿದೆ. ತಿಂಗಳು, ವರ್ಷಗಟ್ಟಲೇ ವಿಳಂಬ ಮಾಡಿ ಯಾವ ಕೆಲಸಗಳು ಆಗುತ್ತಿಲ್ಲ. ಈ ಕುರಿತು ಯಾವ ಶಾಸಕರೂ ಧ್ವನಿ ಎತ್ತುತ್ತಿಲ್ಲ. ಅವರು ಅಧಿಕಾರದಲ್ಲಿದ್ದರೆ ಸಾಕು ಎಂಬ ಮನಸ್ಥಿತಿ ಹಲವರಲ್ಲಿದೆ ಎಂದು ಅಸಮಧಾನ ಹೊರಹಾಕಿದರು.

ಹೊಸದುರ್ಗ ಪುರಸಭೆ ಸದಸ್ಯ ಶ್ರೀನಿವಾಸ್ ಮಾತನಾಡಿ, ನಿಯಮಾನುಸಾರ ಮೀಸಲಾತಿ ಪ್ರಕಟಿಸದೆ, ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿದ್ದು, ಸದಸ್ಯರ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಸಾರ್ವಜನಿಕರಿಗೆ ಮೂಲಸೌಲಭ್ಯ ಒದಗಿಸಲು ತೊಂದರೆಯಾಗುತ್ತಿದೆ. ಇನ್ನಾದರೂ ಎಚ್ಚೆತ್ತುಕೊಂಡು ಮೀಸಲಾತಿ ಪ್ರಕಟಿಸಲಿ ಎಂದು ಆಗ್ರಹಿಸಿದರು.

ಸ್ಥಳೀಯ ಸಂಸ್ಥೆ ಸದಸ್ಯರಾದ ಮಂಜುನಾಥ್‌ಗೊಪ್ಪೆ, ಸುರೇಶ್, ಶ್ರೀನಿವಾಸ್, ಭಾಸ್ಕರ್, ನಸ್ರುಲ್ಲಾ, ಅನಿತಾ ರಮೇಶ್, ತಾರಕೇಶ್ವರಿ, ಭಾಗ್ಯಮ್ಮ, ಅನುರಾಧ ರವಿಶಂಕರ್, ಹೊಸದುರ್ಗದ ದೊಡ್ಡಯ್ಯ, ಹೊಳಲ್ಕೆರೆಯ ಅಶೋಕ್, ಮುರುಗೇಶ್, ಹಿರಿಯೂರಿನ ಅಜ್ಜಪ್ಪ, ಶಿವರಂಜಿನಿ, ಚಳ್ಳಕೆರೆಯ ರಮೇಶ್‌ಗೌಡ, ಮೊಳಕಾಲ್ಮುರಿನ ಲಕ್ಷ್ಮಣ್, ಮಾಜಿ ಸದಸ್ಯ ಟಿ.ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net