

ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನಾದ್ಯಂತ ಪ್ರವರ್ಗ-2ಎ ಮೀಸಲಾತಿ ದುರ್ಬಳಕೆ ತಡೆಗೆ ಆಗ್ರಹಿಸಿ ರಾಜ್ಯಹಿಂದುಳಿದ ವರ್ಗಗಳ ಒಕ್ಕೂಟದ ಪದಾಧಿಕಾರಿಗಳು ಗುರುವಾರ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಗಳಿಗೆ ಮನವಿ ಸಲ್ಲಿಸಿದರು.
ವಾಮ ಮಾರ್ಗದಿಂದ ಮೀಸಲಾತಿ ಪ್ರಮಾಣ ಪತ್ರ ಪಡೆದಿರುವ ಗಾಣಿಗ, ಸಾದು ಮತ್ತಿತರ ಲಿಂಗಾಯತ ಉಪಜಾತಿಗಳ ಜನರ ವಿರುದ್ಧ ತನಿಖೆ ನಡೆಸಿ ಪ್ರಮಾಣ ಪತ್ರಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಹಿಂದುಳಿದ ಜಾತಿಗಳನ್ನು ಮುಖ್ಯವಾಹಿನಿಗೆ ತರುವುದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯವಾಗಿದೆ. ಶಿಕ್ಷಣ, ಉದ್ಯೋಗ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯ ಪಡೆಯಲು ಸಹಕಾರಿಯಾಗಿದೆ. ಪ್ರವರ್ಗಗಳ ವ್ಯಾಪ್ತಿಯಲ್ಲಿ ಇರದ ಗಾಣಿಗ, ಸಾದು ಮತ್ತಿತರ ಕೆಲವು ವೀರಶೈವ-ಲಿಂಗಾಯತ ಉಪಜಾತಿಗಳು ಹಿಂದು ಸಾದರ, ಎಣ್ಣೆ ತೆಗೆಯುವ ಕಾಯಕದ ಗಾಣಿಗ ಜಾತಿಗಳ ಹೆಸರು ದುರ್ಬಳಕೆ ಮಾಡಿಕೊಂಡು ಪ್ರವರ್ಗ-2ಎ ಮೀಸಲಾತಿ ಪಡೆಯಲು ಪ್ರಯತ್ನಿಸಿವೆ ಮತ್ತು ಪಡೆದಿರುವುದು ಸಂವಿಧಾನದ ಆಶಯಗಳಿಗೆ ಅಪಚಾರ ಎಸಗಿದಂತಾಗಿದೆ ಎಂದು ದೂಷಿಸಿದರು.
ಇದರಿಂದ ಮೀಸಲಾತಿ ಪ್ರಯೋಜನ ಪಡೆಯಬೇಕಿದ್ದ ಹಿಂದುಳಿದ ಜಾತಿಗಳಿಗೆ ಅನ್ಯಾಯವಾಗಿದೆ. ಆದ್ದರಿಂದ ತನಿಖೆ ನಡೆಸಿ ಕಠಿಣ ಕಾನೂನು ಜರುಗಿಸಬೇಕೆಂದು ಆಗ್ರಹಿಸಿರುವ ಒಕ್ಕೂಟವು ವಿಳಂಬವಾದರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.
ಒಕ್ಕೂಟದ ರಾಜ್ಯ ಸಂಚಾಲಕ ಬಿ.ಟಿ. ಜಗದೀಶ್, ವಕೀಲ ಸುದರ್ಶನ್, ಎಚ್. ಆನಂದಕುಮಾರ್, ಅಶೋಕ್‌ನಾಯ್ಡು, ರಹಮತ್‌ವುಲ್ಲಾ, ಇಂತಿಯಾಜ್, ಶ್ರೀನಿವಾಸ್, ಜೀವನ್, ಕೃಷ್ಣಮೂರ್ತಿ, ಪ್ರಾಣೇಶ್, ವಿನಾಯಕ ಸೇರಿ ನಾನಾ ಸಮುದಾಯಗಳ ಮುಖಂಡರು ಇದ್ದರು.