

ಶಿಡ್ಲಘಟ್ಟ : ವಾಲ್ಮೀಕಿ ಸಮುದಾಯಕ್ಕೆ ನೀಡಿರುವ ಭರವಸೆಯಂತೆ ಶೇ.7.5 ಮೀಸಲಾತಿಯನ್ನು ಕೂಡಲೇ ಘೋಷಿಸಿ, ಕೊಟ್ಟ ಮಾತನ್ನು ಉಳಿಸಿಕೊಳ್ಳುವಂತೆ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಆಗ್ರಹಿಸಿದರು.
ಫೆ.8 ಮತ್ತು 9ರಂದು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಆಯೋಜನೆಗೊಂಡಿರುವ ವಾಲ್ಮೀಕಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ನಗರಕ್ಕೆ ಭೇಟಿ ನೀಡಿದ್ದ ಶ್ರೀಗಳು, ನಗರದ ಎಸ್‌ಎಲ್‌ಎನ್ ಪ್ಲಾಜಾದಲ್ಲಿ ಸಮುದಾಯದ ಮುಖಂಡರ ಸಭೆ ಹಾಗು ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿರುವ ಸಮುದಾಯದ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದರು.
ರಾಜ್ಯದ ನಾಲ್ಕನೇ ಅತಿದೊಡ್ಡ ಸಮುದಾಯ ಎಂಬ ಹೆಗ್ಗಳಿಕೆ ವಾಲ್ಮೀಕಿ ಸಮುದಾಯದ್ದಾಗಿದೆ. ಸಮುದಾಯದ ಮಕ್ಕಳಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇ.7.5 ಮೀಸಲಾತಿ ನೀಡುವಂತೆ ಮೂರು ದಶಕಗಳಿಂದ ಹೋರಾಟ ಮಾಡಲಾಗುತ್ತಿದ್ದರೂ ಇದುವರೆಗೂ ಅನುಷ್ಠಾನಗೊಂಡಿಲ್ಲ. ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೂ ಮುನ್ನ ಮೀಸಲಾತಿ ಹೆಚ್ಚಿಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳ್ಳಲಿದೆ ಎಂಬ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಿದರು.
ಗ್ರಾಪಂಗೆ ಆಯ್ಕೆಯಾಗಿರುವ ಸದಸ್ಯರು ತಾವು ಪ್ರತಿನಿಧಿಸುವ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು. ಸಮುದಾಯದ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟಾಗಿ ಏಳಿಗೆಗಾಗಿ ದುಡಿಯಬೇಕೆಂಬ ಸಲಹೆಯನ್ನು ಸ್ವಾಮೀಜಿ ನೀಡಿದರು.
ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ಜಿಲ್ಲಾಧ್ಯಕ್ಷ, ಜಿಪಂ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಸಮುದಾಯದ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆಯಾದರೂ ಗುರುಪೀಠಕ್ಕೆ ಭೇಟಿ ನೀಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ರಾಜ್ಯಾದ್ಯಂತ ಇರುವ ಸಮುದಾಯದವರು ಒಗ್ಗಟ್ಟಾಗಿರಲು ಸಾಧ್ಯವಾಗುತ್ತದೆ ಎಂದರು.
ಜಾತ್ರಾ ಮಹೋತ್ಸವದ ಆಚರಣಾ ಸಮಿತಿಗೆ ತಾಲೂಕಿನಿಂದ ಐವರು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾಲೂಕು ಮಹಾಸಭಾ ಅಧ್ಯಕ್ಷ ರಾಮಚಂದ್ರಪ್ಪ, ಮುಖಂಡರಾದ ರಾಜೇಂದ್ರ, ನಟರಾಜ್, ಬ್ಯಾಟರಾಯಪ್ಪ, ಶಿವಶಂಕರ್, ಜೆ.ಎಂ.ವೆಂಕಟೇಶ್, ತ್ಯಾಗರಾಜ್, ನಂಜಪ್ಪ ಇತರರಿದ್ದರು.