

ಗದಗ:
ಲಿಂಗಾಯತ ಪಂಚಮಸಾಲಿಗೆ ೨ಎ ಮೀಸಲಾತಿ ಮತ್ತು ಲಿಂಗಾಯತ ಎಲ್ಲ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಗಜೇಂದ್ರಗಡದಲ್ಲಿ ಡಿ.೧೦ ರಂದು ಹಾಗೂ ಗದಗನಲ್ಲಿ ಡಿ.೧೭ ರಂದು ಹಕ್ಕೊತ್ತಾಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದರು.
ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ``ಗ್ರಾಮ, ತಾಲ್ಲೂಕು ಮಟ್ಟದಲ್ಲಿ ಜಾಗೃತಿ ಹಅಗೂ ಸಮಾವೇಶ ಕುರಿತು ಪೂರ್ವಭಾವಿ ಸಭೆ ನಡೆಸಲಾಗಿದೆ. ಆದಷ್ಟು ಬೇಗ ಮೀಸಲಾತಿ ನೀಡದೇ ಇದ್ದರೆ ಸರ್ಕಾರಗಳ ಮೇಲೆ ನಂಬಿಕೆ ಹೋಗುತ್ತವೆ" ಎಂದರು.
ಗದಗನಲ್ಲಿ ನಡೆಯುವ ಸಮಾವೇಶವನ್ನು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಉದ್ಘಾಟಿಸುವರು. ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ದಿಕ್ಸೂಚಿ ಭಾಷಣ ಮಾಡುವರು. ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಮಾಜಿ ಸಚಿವ ವಿನಯ ಕುಲಕರ್ಣಿ ಸೇರಿ ಹಲವರು ಉಪಸ್ಥಿತಿ ಇರುವರು ಎಂದು ಮಾಹಿತಿ ನೀಡಿದರು.
ಅನೀಲಕುಮಾರ ಪಾಟೀಲ, ಅಯ್ಯಪ್ಪ ಅಂಗಡಿ, ಸ್ವಾತಿ ಅಕ್ಕಿ, ಬಸವರಾಜ ಗಡ್ಡೆಪ್ಪನವರ, ಎಂ.ಬಿ. ದೇಸಾಯಿ, ಸಂಗಮೇಶ ಕವಳಿಕಾಯಿ ಸೇರಿ ಹಲವರು ಇದ್ದರು.
ಮೀಸಲಾತಿ ಕೊಟ್ಟರೆ ಸಿಎಂ ಗೆ ಸನ್ಮಾನ, ಇಲ್ಲದಿದ್ದರೆ ಹೋರಾಟ:
೨ಎ ಮೀಸಲಾತಿ ಘೋಷಿಸಿದರೆ ಸಿಎಂ ಬಸವರಾಜ ಬೊಮ್ಮಾಯಿಗೆ ವಿಶೇಷ ಸನ್ಮಾನ. ಇಲ್ಲವಾದಲ್ಲಿ ಹೋರಾಟ ನಿರಂತರವಾಗಿರಲಿದೆ ಎಂದು ತಿಳಿಸಿದ ಶ್ರೀಗಳು, ಸಿಎಂ ಬಸವರಾಜ ಬೊಮ್ಮಾಯಿ ಡಿ.೧೯ ರಂದು ೨ಎ ಮೀಸಲಾತಿ ನೀಡುವ ಭರವಸೆ ನೀಡಿದ್ದಾರೆ. ಈಡೇರಿದರೆ ಡಿ.೨೨ ರಂದು ಬೆಳಗಾವಿಯ ಸುವರ್ಣ ಸೌಧದ ಎದುರು ೧೦೦ ಎಕರೆ ಜಮೀನಿನಲ್ಲಿ ನಡೆಯುವ ಪಂಚಮಸಾಲಿ ಸಮುದಾಯದ ಬೃಹತ್ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಹಸಿರು ಶಾಲು, ಗೋಕಾಕ ಕರದಂಟು, ಮಠದಲ್ಲಿ ಭಾವಚಿತ್ರ ಹೀಗೆ ಐದು ವಿಶೇಷತೆಗಳಿಂದ ಸನ್ಮಾನಿಸಲಾಗುವುದು. ಮೀಸಲಾತಿ ಘೋಷಿಸದಿದ್ದರೆ ಮುಂದಿನ ಹೋರಾಟದ ಕುರಿತು ಸಮಾವೇಶದಲ್ಲಿ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.