ಮೀಸಲಾತಿ ಅಂತಿಮ ಆದೇಶದಲ್ಲಿ ಎಲ್ಲವೂ ಸ್ಪಷ್ಟ

Basavaraj Bommai
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿ ಯಾವುದೇ ರೀತಿಯ ಸಂವಿಧಾನಾತ್ಮಕ ತೊಡಕು ಉಂಟಾಗುವುದಿಲ್ಲ. ಇದು ಮಧ್ಯಂತರ ವರದಿ. ಅಂತಿಮ ಆದೇಶದಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದ ಉದ್ದೇಶವನ್ನು ಹೇಳಿದ್ದೇವೆ. ಅಂತಿಮ ವರದಿಯಲ್ಲಿ ಅಂಕಿ-ಅಂಶಗಳ ಮಾಹಿತಿ ನೀಡುತ್ತೇವೆ. ಮೀಸಲಾತಿ ಜಾರಿ ವಿಷಯದಲ್ಲಿ ಸಂಬಂಧಪಟ್ಟವರ ಜತೆಗೆ ಇನ್ನಷ್ಟು ಚರ್ಚೆ ನಡೆಸಲಾಗುವುದು. ಹಿಂದುಳಿದ ವರ್ಗದವರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ. ಕೆಲ ವರ್ಗದ ಜನರಿಗೆ ಶೈಕ್ಷಣಿಕ-ಉದ್ಯೋಗದಲ್ಲಿ ಹಿನ್ನಡೆಯಾಗಿರುವುದು ನಿಜ. ಅವರಿಗೆ ನ್ಯಾಯ ಕೊಡುವ ನಿಟ್ಟಿನಲ್ಲಿ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಇದಕ್ಕೆ ಸ್ಪಷ್ಟೀಕರಣ ಬೇಕಾದರೆ ಕೊಡುತ್ತೇವೆ. ಇದರಲ್ಲಿ ಯಾರಿಗೂ ಅನ್ಯಾಯ ಮಾಡುವ ಪ್ರಶ್ನೆಯೇ ಇಲ್ಲ. ಪ್ರತಿಪಕ್ಷದವರು ಅಧಿಕಾರದಲ್ಲಿ ಇದ್ದಾಗ ಈ ಸಮುದಾಯಗಳ ಬೇಡಿಕೆ ಈಡೇರಿಸಲು ಆಗಲಿಲ್ಲ. ಈಗ ನಾವು ಮಾಡುತ್ತಿರುವುದರಿಂದ ಅವರಿಗೆ ಸಮಸ್ಯೆ ಆಗಿದೆ ಎಂದು ಕುಟುಕಿದರು.

ಮಹದಾಯಿ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ಗ್ರೀನ್ ಸಿಗ್ನಲ್ ಆದೇಶದಲ್ಲಿ ಕೆಳಗಡೆ ಸಹಿ ಇದೆ. ಕಾಂಗ್ರೆಸ್ ಯಾವ ಉದ್ದೇಶಕ್ಕೆ ಆರೋಪಿಸುತ್ತಿದೆ ಗೊತ್ತಿಲ್ಲ. ಮಹದಾಯಿಗಾಗಿ ನಾವು ಹೋರಾಟ ಮಾಡಿದ್ದೆವು. ಅವರೂ ಕೂಡ ಹೋರಾಟ ಮಾಡಿದ್ದರು. 20-25 ವರ್ಷದ ಹೋರಾಟಕ್ಕೆ ಈಗ ರ್ತಾಕ ಜಯ ಸಿಕ್ಕಿದೆ. ಇಂಥ ಸಂದರ್ಭದಲ್ಲಿ ಲೋಪದೋಷ ಹುಡುಕುವುದು ಅವರ ಮನಸ್ಥಿತಿ ಸೂಚಿಸುತ್ತದೆ. ಕಾಂಗ್ರೆಸ್​ನವರ ಟೀಕೆ-ಟಿಪ್ಪಣಿಗಳಿಗೆ ತಲೆಕೆಡಿಸಿಕೊಳ್ಳವುದಿಲ್ಲ. ಡಿಪಿಆರ್ ಆಗಿದೆ. ಎಂಒಎಫ್ ಕ್ಲಿಯರೆನ್ಸ್ ತೆಗೆದುಕೊಂಡು ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದರು.

ಶುಭಾಶಯ: ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯಗಳು. ನಾಡು ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಹೊಂದಲಿ. ಸರ್ವ ಜನತೆಗೆ ಹೊಸ ವರ್ಷ ಸಂತೋಷ ತರಲಿ ಎಂದು ಸಿಎಂ ಬೊಮ್ಮಾಯಿ ಶುಭಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net