ಮಳಖೇಡ : ಸಿಕ್ಕ ಮೀನು ಮಾರಾಟ ಮಾಡಿ ಸಿಗುವ ಅಲ್ಪ-ಸ್ವಲ್ಪ ಹಣದಲ್ಲಿ ಹೊಟ್ಟೆ ತುಂಬಿಸಿಕೊಳ್ಳಬೇಕು. ಇಲ್ಲದಿದ್ದರೆ ಉಪವಾಸವೇ ಗತಿ. ಮಳೆಯಾದಾಗೊಮ್ಮೆ ರಾತ್ರಿ ಜಾಗರಣೆ ಪಕ್ಕಾ. ಹೊಳೆ ಬಂದರೆ ಮಕ್ಕಳ ಸಮೇತ ಗಂಟು-ಮೂಟೆ ಹೊತ್ತು ಬೇರೆಡೆ ಸಾಗಬೇಕು…
ಮಳಖೇಡದ ಕಾಗಿಣಾ ನದಿ ದಡದಲ್ಲಿರುವ ಮೀನುಗಾರರ ಕಥೆ(ವ್ಯಥೆ) ಇದು. ಯಾವುದೇ ಮೂಲಸೌಕರ್ಯ ಇಲ್ಲದ ಮಳಖೇಡದ ತೇರು ಮೈದಾನದಲ್ಲಿ ಸಂಗಾವಿ(ಎA) ಮಾರ್ಗದ ಕಾಗಿಣಾ ನದಿ ದಡದ ಹತ್ತಿರ ಮೀನು ಮಾರುತ್ತ ೮ ವರ್ಷದಿಂದ ಗುಡಿಸಲಲ್ಲಿ ಸಂಕಷ್ಟದ ಜೀವನ ಸಾಗಿಸುತ್ತಿರುವ ಕುಟುಂಬಗಳು ಸರ್ಕಾರದಿಂದ ಶಾಶ್ವತ ಸೂರು ಸಿಗುವ ಆಶಾಭಾವದೊಂದಿಗೆ ದಿನದೂಡುತ್ತಿವೆ.
ಕಾಗಿಣೆ ತೀರದಲ್ಲಿ ಈ ಮೊದಲು ೧೫ ಕುಟುಂಬಗಳಿದ್ದವು. ಕಳೆದ ವರ್ಷ ಪ್ರವಾಹದಿಂದಾಗಿ ದವಸ-ಧಾನ್ಯ, ಮೀನು ಹಿಡಿಯುವ ಸಾಮಗ್ರಿ ನೀರು ಪಾಲಾಗಿದ್ದರಿಂದ ಏಳು ಪರಿವಾರಗಳು ಬೇರೆಡೆ ವಲಸೆ ಹೋಗಿವೆ. ಪ್ರಸ್ತುತ ೮ ಕುಟುಂಬದಲ್ಲಿ ಅಂದಾಜು ೫೨ ಜನರಿದ್ದಾರೆ. ಪ್ರತಿವರ್ಷ ಮಳೆಗಾಲದಲ್ಲಿ ಪ್ರವಾಹ ಬಂದಾಗ ಜೀವ ಕೈಯಲ್ಲಿ ಹಿಡಿದು ಆತಂಕದಲ್ಲೇ ಜೀವನ ಸಾಗಿಸುವುದು ಅನಿವಾರ್ಯವಾಗಿದೆ.
ನದಿ ನೀರಿನಲ್ಲಿ ತೇಲಿಬರುವ ವಿಷ ಜಂತುಗಳ ಕಾಟ ಒಂದೆಡೆಯಾದರೆ, ಯಾವಾಗ ಪ್ರವಾಹದಿಂದ ಗುಡಿಸಲುಗಳು ಮುಳುಗುತ್ತವೆಯೋ ಎಂಬ ಭಯ ಮತ್ತೊಂದೆಡೆ. ಇಂಥ ಅತಂತ್ರ ಸ್ಥಿತಿಯಲ್ಲಿ ಮೀನುಗಾರರ ಬದುಕಿನ ಬಂಡಿ ಸಾಗಿದೆ.
ಜಿಲ್ಲಾಡಳಿತ ಅಥವಾ ಜನಪ್ರತಿನಿಧಿಗಳು ಸೌಜನ್ಯಕ್ಕೂ ಇವರತ್ತ ಕಣ್ಣೆತ್ತಿ ನೋಡಿಲ್ಲ. ಇನ್ನೂ ಕಾಲಮಿಂಚಿಲ್ಲ. ಈ ಬಡ ಕುಟುಂಬಗಳಿಗೆ ಮಳಖೇಡ ಹತ್ತಿರ ಸರ್ಕಾರಿ ಸ್ಥಳ ಗುರುತಿಸಿ ಶಾಶ್ವತ ಸೂರು ಕಲ್ಪಿಸಿಕೊಡುವ ಮೂಲಕ ಸರ್ಕಾರ ಭದ್ರತೆ ಒದಗಿಸುವುದು ಜರೂರಿಯಾಗಿದೆ.