ಮೀನುಗಾರರ ರಕ್ಷಣೆಗೆ ಸದಾ ಸಿದ್ಧ

hsd minugarike 13 p3
Published on

ಹೊಸದುರ್ಗ: ವಾಣಿವಿಲಾಸ ಸಾಗರದ ಹಿನ್ನೀರು ಪ್ರದೇಶದಲ್ಲಿ ಮೀನುಗಾರಿಕೆ ನಡೆಸುವ ಸಂಬಂಧ ಸಚಿವ ಡಿ.ಸುಧಾಕರ್ ಹಾಗೂ ಶಾಸಕ ಬಿ.ಜಿ.ಗೋವಿಂದಪ್ಪ ಮಧ್ಯೆ ಅಸಹನೆಗೆ ಕಾರಣವಾಗಿದೆ.

ಸ್ಥಳೀಯ ಮೀನುಗಾರರು ಮೀನುಗಾರಿಕೆ ಸಹಕಾರ ಸಂಘದ ಮೂಲಕ ಮೀನುಗಾರಿಕೆ ನಡೆಸಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ಸಚಿವ ಡಿ.ಸುಧಾಕರ್, ಮೀನುಗಾರಿಕೆಯನ್ನು ಹರಾಜು ಹಾಕಲು ನಿರ್ಧರಿಸಿರುವುದು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಸಂಬಂಧ ಮೀನುಗಾರಿಕೆ ಸಹಕಾರ ಸಂಘದ ಸದಸ್ಯರು ಶ್ರೀರಾಂಪುರ ಗ್ರಾಮದಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ ಅವರನ್ನು ಶುಕ್ರವಾರ ಭೇಟಿ ಮಾಡಿ ಅಳಲು ತೋಡಿಕೊಂಡರು.

ಯಾವುದೇ ಕಾರಣಕ್ಕೂ ಮೀನುಗಾರಿಕೆ ಗುತ್ತಿಗೆಯನ್ನು ಹರಾಜು ಹಾಕದಂತೆ ತಡೆಯುವಂತೆ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಬಿ.ಜಿ.ಗೋವಿಂದಪ್ಪ, ಜಿಲ್ಲಾ ಸಚಿವರ ಕ್ರಮ ತಪ್ಪು. ಇದಕ್ಕೆ ಅವಕಾಶ ನೀಡುವುದಿಲ್ಲ. ನಾನು ಸ್ಥಳೀಯ ಮೀನುಗಾರರ ಪರವಾಗಿದ್ದೇನೆ. ಹಿಂದೆಯೂ ಅವರ ಪರವಾಗಿ ಹೋರಾಟ ನಡೆಸಿ ಸಾಮಾನ್ಯ ಮೀನುಗಾರರಿಗೆ ಮೀನು ಹಿಡಿಯಲು ಅವಕಾಶ ಒದಗಿಸಿದ್ದೇನೆ ಎಂದು ಹೇಳಿದರು.

ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಿಗೆ ಕರೆ ಮಾಡಿದ ಶಾಸಕರು, ಯಾವುದೇ ಕಾರಣದಿಂದಲೂ ಹರಾಜು ಹಾಕಬಾರದು. ಸ್ಪಂದಿಸದಿದ್ದರೆ ಹೋರಾಟಕ್ಕೂ ಸಿದ್ಧವಾಗಿದ್ದೇನೆ. ನಾನೂ ಜನರ ಪರವಾಗಿದ್ದೇನೆ, ಅಧಿಕಾರಿಗಳಾದ ನೀವೂ ಜನರ ಪರವಾಗಿ ನಿಲ್ಲಬೇಕು ಎಂದು ತಾಕೀತು ಮಾಡಿದರು.

ನನ್ನ ವಿರುದ್ಧ ಕೇಸ್ ಹಾಕಲಿ: ಮೀನುಗಾರಿಕೆ ಗುತ್ತಿಗೆಯನ್ನು ಹರಾಜು ಹಾಕಲು ಸಚಿವರು ನಿರ್ಧರಿಸಿದರೆ, ನಾನೇ ಮುಂದೆ ನಿಂತು ಮೀನು ಹಿಡಿಸುತ್ತೇನೆ. ಸಚಿವರು ನನ್ನ ಮೇಲೆ ಕೇಸ್ ಹಾಕಿಸಲಿ ಎಂದು ಗೋವಿಂದಪ್ಪ ಸವಾಲು ಹಾಕಿದರು. ಯಾರೋ ಒಬ್ಬ ವ್ಯಕ್ತಿಯನ್ನು ಶ್ರೀಮಂತನಾಗಿಸುವ ಉದ್ದೇಶದಿಂದ ಹತ್ತಾರು ವರ್ಷಗಳಿಂದ ಮೀನುಗಾರಿಕೆಯನ್ನೇ ಮುಖ್ಯ ಕಸುಬಾಗಿಸಿಕೊಂಡು ಬದುಕುತ್ತಿರುವ ವಿ.ವಿ.ಸಾಗರದ ಹಿನ್ನೀರು ಭಾಗದ ಜನರ ಬದುಕು ಹಾಳಾಗಲು ಬಿಡುವುದಿಲ್ಲ. ಇಲ್ಲಿಯವರೆಗೆ ಜಾರಿಯಲ್ಲಿದ್ದ ಪರವಾನಗಿ ಪಡೆದು ಮೀನು ಹಿಡಿಯುವ ಪದ್ಧತಿಯೇ ಮುಂದುವರಿಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಬೇಡ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net