ಮೀನುಗಾರ ಮಹಿಳೆಯರಿಗೆ ಡಬ್ಲುಐಟಿ ಪ್ರಶಸ್ತಿ

13KWR-4
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ಜಗತ್ತಿನಲ್ಲಿ 300 ಮಾತ್ರ ವೇಲ್ ಶಾರ್ಕ್‌ಗಳು ಉಳಿದುಕೊಂಡಿದ್ದು, ಅವುಗಳ ಸಂರಕ್ಷಿಸಬೇಕಿದೆ ಎಂದು ವೈಲ್ಡ್‌ಲೈಫ್‌ ಟ್ರಸ್ಟ್ ಆಫ್ ಇಂಡಿಯಾ(ಡಬ್ಲುಐಟಿ)ಯೋಜನಾ ನಿರ್ದೇಶಕ ಫಾರೂಕ್ ಬ್ಲೋಚ್ ಹೇಳಿದರು.
ಹೊನ್ನಾವರ ಕಾಸರಕೋಡು ಟೊಂಕಾ ಬಂದರಿನಲ್ಲಿ ಮಂಗಳವಾರ ಆಯೋಜಿಸಿದ್ದ ವೇಲ್ ಶಾರ್ಕ್ ಸಂರಕ್ಷಣಾ ಜಾಗೃತಿ ಕಾರ್ಯಕ್ರಮ ಹಾಗೂ ಸೇವ್ ದ ವೇಲ್ ಶಾರ್ಕ್ ಮೊಬೈಲ್ ಆ್ಯಪ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪುರಾತನವಾದ ಮೀನಿನ ಪ್ರಭೇದ ಇದಾಗಿದ್ದು, 1972 ರ ಭಾತತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನ್ವಯ ಇದು ಸಂರಕ್ಷಿತ ಜೀವಿಯಾಗಿದೆ. 2004 ರಲ್ಲಿ ಗುಜರಾತ್ ಸರ್ಕಾರದ ಆಗಿನ ಸಿಎಂ ನರೇಂದ್ರ ಮೋದಿ ಅವರು ವೇಲ್ ಶಾರ್ಕ್ ರಕ್ಷಣಾ ಅಭಿಯಾನ ಆರಂಭಿಸಿದರು ಎಂದು ಮಾಹಿತಿ ನೀಡಿದರು.
ಕರ್ನಾಟಕ ಜೀವ ವೈವಿಧ್ಯ ಮಂಡಳಿ ಸದಸ್ಯ ಪ್ರಕಾಶ ಮೇಸ್ತ, ಸಮುದ್ರ ಜೀವಿಗಳ ರಕ್ಷಣೆ ಎಲ್ಲರ ಜವಾಬ್ದಾರಿ ಎಂದರು. ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ನಾಗರಾಜ ಚಲ್ಲಜ್ಜಿಮನೆ, ಹೊನ್ನಾವರ ಎಸಿಎಫ್ ಸುದರ್ಶನ, ಭಾರತೀಯ ಕೋಸ್ಟ್‌ಗಾರ್ಡ್‌ ಕಾರವಾರ ಕಚೇರಿಯ ಕಮಾಂಡೆಂಟ್ ಎಂ.ಟಿ.ಮಂಜುನಾಥ ಇದ್ದರು.
ಡಬ್ಲುಐಟಿಯಿಂದ ತರಲಾಗಿದ್ದ ಬೃಹತ್ ವೇಲ್ ಶಾರ್ಕ್‌ ಬಲೂನ್ ಮಾದರಿ ಗಮನ ಸೆಳೆಯಿತು. ಹೊನ್ನಾವರ ಎಸ್‌ಡಿಎಂ ಕಾಲೇಜ್ ಹಾಗೂ ಟೊಂಕಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮೀನುಗಾರ ಮಹಿಳೆಯರಿಗೆ ಪ್ರಶಸ್ತಿ:
ಕಡಲಾಮೆಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡ ಇಬ್ಬರು ಹಾಗೂ ಒಂದು ಸಂಘಟನೆಗೆ ವೈಲ್ಡ್ ಲೈಫ್ ಟ್ರಸ್ಟ್ನ `ಸಂರಕ್ಷಣಾ ಸೇನಾನಿ' ಪ್ರಶಸ್ತಿಯನ್ನು ಈ ಸಂದರ್ಭದಲ್ಲಿ ನೀಡಲಾಯಿತು. ಸಮುದ್ರದಲ್ಲಿ ಈಜಿ ಬಲೆಗೆ ಸಿಲುಕಿದ್ದ ಕಡಲಾಮೆಯನ್ನು ರಕ್ಷಿಸಿದ ರವಿ ಅಂಬಿಗ, ಕಡಲಾಮೆ ಸಂರಕ್ಷಣೆಗೆ ಶ್ರಮಿಸುತ್ತಿರುವ ಹೊನ್ನಾವರ ಎಆರ್‌ಎಫ್‌ಒ ಗೌಸ್ ಹಾಗೂ ಕಡಲ ತೀರ ಸ್ವಚ್ಛತೆಗೆ ಶ್ರಮಿಸುತ್ತಿರುವ ಹೊನ್ನಾವರ ಕಾಸರಕೋಡು ಮೀನು ಉತ್ಪಾದಕ ಮತ್ತು ಮತ್ಸ್ಯೋದ್ಯಮ ಸಂಘಕ್ಕೆ ಪ್ರಶಸ್ತಿ ನೀಡಲಾಯಿತು. ಸಂಘದ ಪರವಾಗಿ ಅಧ್ಯಕ್ಷೆ ರೇಣುಕಾ ಗಣಪತಿ ತಾಂಡೇಲ, ಕಾರ್ಯದರ್ಶಿ ಪ್ರೀತಿ ತಾಂಡೇಲ ಪ್ರಶಸ್ತಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net