ಮೀನು ಹಿಡಿಯಲು ಹೋದ ಯುವಕ ನೀರು ಪಾಲು

Oplus_131072
Oplus_131072
Published on

ಹಲಗೂರು: ಸಮೀಪದ ತೊರೆಕಾಡನಹಳ್ಳಿ ಸೇತುವೆ ಬಳಿ ಶಿಂಷಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕನೊಬ್ಬ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ.

ಅನೇಕಲ್ ತಾಲೂಕಿನ ಬನ್ನೇರುಘಟ್ಟ ಸಮೀಪದ ಬ್ಯಾಡರಾಯನದೊಡ್ಡಿ ಗ್ರಾಮದ ಅರುಣ್ (24) ಎಂಬಾತನೇ ಕೊಚ್ಚಿ ಹೋದ ಯುವಕನಾಗಿದ್ದಾನೆ.

ಅರುಣ್ ತೊರೆಕಾಡನಹಳ್ಳಿಯ ವ್ಯಾಪ್ತಿಯ ಶಿಂಷಾ ನದಿಗೆ ಮೀನು ಹಿಡಿಯಲು ತನ್ನ ಐದು ಮಂದಿ ಸಹಪಾಟಿಗಳೊಂದಿಗೆ ಬುಧವಾರ ರಾತ್ರಿ ಬಂದಿದ್ದಾನೆ. ಶಿಂಷಾ ನದಿ ಪಾತ್ರದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಇಗ್ಗಲೂರು ಅಣೆಕಟ್ಟೆಯಿಂದ ಹೆಚ್ಚಿನ ಪ್ರಮಾಣದ ನೀರನ್ನು ರಾತ್ರಿ ಶಿಂಷಾ ನದಿಗೆ ಹರಿಬಿಡಲಾಗಿದೆ. ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ಸೇತುವೆ ಕೆಳಗಡೆ ಕುಳಿತು ಮೀನು ಹಿಡಿಯಲು ಹೋಗಿದ್ದವರಿಗೆ ಏಕಾಏಕಿ ನೀರು ಅಪ್ಪಳಿಸಿದೆ. ತಕ್ಷಣ ನಾಲ್ವರು ಓಡಿ ಹೋಗಿ ನೀರಿನ ಸೆಳೆತದಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಅರುಣ್ ಮಾತ್ರ ತಪ್ಪಿಸಿಕೊಳ್ಳಲಾಗದೇ ನದಿಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ.

ಹಲಗೂರು ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಲೊಕೇಶ ಮತ್ತು ಮಳವಳ್ಳಿ ಅಗ್ನಿಶಾಮಕ ಠಾಣಾ ಅಧಿಕಾರಿ ಅರುಣ್ ಮತ್ತು ಶ್ರೀಧರ್ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಆಗಮಿಸಿ, ಅರುಣ್‌ನನ್ನು ಪತ್ತೆ ಹಚ್ಚುವ ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net