

ಎಚ್.ಡಿ. ಕೋಟೆ: ಮೀನು ಹಿಡಿಯಲು ಹೋಗಿದ್ದ ಆದಿವಾಸಿ ಯುವಕ ತಾಲೂಕಿನ ಬಳ್ಳೆ ಹಾಡಿಯ ಕಬಿನಿ ಹಿನ್ನೀರಿನ ಸೇತುವೆ ಬಳಿ ಅನುಮಾನಸ್ಪಾದವಾಗಿ ಮೃತಪಟ್ಟಿದ್ದಾನೆ. ಎನ್.ಬೇಗೂರು ವ್ಯಾಪ್ತಿಯ ಹಿಸಹಳ್ಳಿ ಹಾಡಿ ನಿವಾಸಿ ನಟರಾಜು ಎಂಬುವರ ಮಗ ಮಾಸ್ತಿ (30) ಮೃತ ಯುವಕ.
ಮೀನು ಹಿಡಿಯಲೆಂದು ಮಂಗಳವಾರ ರಾತ್ರಿ 7 ಜನ ಗ್ರಾಮಸ್ಥರೊಂದಿಗೆ ಹೋಗಿದ್ದ ಮಾಸ್ತಿ, ಪ್ರತ್ಯೇಕವಾಗಿ ಮೀನು ಹಿಡಿಯುತ್ತಿದ್ದ ಎನ್ನಲಾಗಿದೆ.
ಜತೆಗಿದ್ದವರು ಸಲ್ಪ ಸಮಯದ ನಂತರ ಗಮನಿಸಿದಾಗ ಹೊಳೆ ಅಂಚಿನಲ್ಲಿ ಮಾಸ್ತಿ ಶವವಾಗಿದ್ದ. ಸ್ಥಳಕ್ಕೆ ಹೊಸಹಳ್ಳಿ ಹಾಡಿಯ ಮುಖಂಡರು ಹಾಗೂ ಬಳ್ಳೆ ಹಾಡಿಯ ನಿವಾಸಿಗಳು ಬುಧವಾರ ಭೇಟಿ ನೀಡಿ ಮಾಸ್ತಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಈತನನ್ನು ಅರಣ್ಯ ಸಿಬ್ಬಂದಿ ಅಥವಾ ಮೀನು ಹಿಡಿಯಲು ಹೋದವರು ಸಾಯಿಸಿರಬಹುದು ಎಂಬ ಅನುಮಾನ ಹೆಚ್ಚಾಗಿದೆ. ಅಂತರಸಂತೆ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಚ್.ಡಿ.ಕೋಟೆ ಶವಾಗಾರಕ್ಕೆ ಸಾಗಿಸಲಾಗಿದೆ.
ಸಂಬಂಧ ಇಲ್ಲ: ಅರಣ್ಯ ಇಲಾಖೆ ಸಿಬ್ಬಂದಿಗೂ, ಮಾಸ್ತಿ ಸಾವಿಗೂ ಸಂಬಂಧ ಇಲ್ಲ ಎಂದು ಮೇಟಿಕುಪ್ಪೆ ವನ್ಯಜೀವಿ ಉಪ ವಿಭಾಗದ ಎಸಿಎಫ್ ರಂಗಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.