

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಜಾಗ ಒದಗಿಸಿದರೆ ಸುಸಜ್ಜಿತವಾದ ಮೀನು ಸಗಟು ಮಾರುಕಟ್ಟೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಲಮ್ ಬೋರ್ಡ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಇಲ್ಲಿನ ಮಂಟೂರು ರಸ್ತೆ ಬಳಿ ಮೀನು ಮಾರಾಟಗಾರರ ಸಂಘದಿಂದ ಸ್ಥಾಪಿಸಲಾದ ತಾತ್ಕಾಲಿಕವಾದ ಮೀನು ಸಗಟು ಮಾರುಕಟ್ಟೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಹುಬ್ಬಳ್ಳಿ ನಗರ ಬೆಳೆಯುತ್ತಿದೆ. ಗಣೇಶಪೇಟೆಯಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ ಮಾಡಿದ್ದರೂ ಸಗಟು ವ್ಯಾಪಾರಕ್ಕೆ ಇಕ್ಕಟ್ಟಾಗಿದೆ. ಹಾಗಾಗಿ ಸುಸಜ್ಜಿತ ಮೀನು ಸಗಟು ಮಾರುಕಟ್ಟೆ ನಿರ್ಮಾಣ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಮಂಟೂರು ರಸ್ತೆಯಲ್ಲಿ ಮೀನು ಸಗಟು ಮಾರುಕಟ್ಟೆ ಸ್ಥಾಪನೆಗೆ ಈ ಭಾಗದ ಜನರ ಸಾಕಷ್ಟು ವಿರೋಧವಿತ್ತು. ಆದರೆ, ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಈ ಮಾರುಕಟ್ಟೆಗೆ ಪರವಾನಿಗೆ ಕೊಡಸಲಾಗಿದೆ. ವ್ಯಾಪಾರಸ್ಥರು ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ವ್ಯಾಪಾರ ನಡೆಸಬೇಕು. ಮುಖ್ಯವಾಗಿ ಶುಚಿತ್ವ ಕಾಪಾಡಬೇಕು. ವಾಹನಗಳನ್ನು ಯಾವುದೇ ಕಾರಣಕ್ಕೂ ರಸ್ತೆಗಳಲ್ಲಿ ನಿಲ್ಲಿಸಬಾರದು. ಒಂದು ವೇಳೆ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಾಲಿಕೆ ಸದಸ್ಯ ಇಲಿಯಾಸ್ ಮನಿಯಾರ್, ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಶರೀಫ್ ಅದ್ವಾನಿ, ಮೀನು ಮಾರಾಟಗಾರರ ಸಂಘದ ಅಧ್ಯಕ್ಷ ದಾದಾಹಯಾತ ಖೈರಾತಿ, ಮುಖಂಡ ನಾಸಿರ್ ಅಸುಂಡಿ, ಮೊಹಮ್ಮದ ಯೂಸೂಫ್ ಧಾರವಾಡ, ಬಾಬಾಜಾನ್ ಚೌಧರಿ, ಜಾಫರ್ ಮಂಚಿನಕೊಪ್ಪ, ಇರ್ಫಾನ್ ಚೌಧರಿ, ಫಯಾಜ್ ಕಲಘಟಗಿ, ಇತರರು ಇದ್ದರು.
ಸಾಕಷ್ಟು ವಿರೋಧದ ಮಧ್ಯೆಯು ಮೀನು ಸಗಟು (ತಾತ್ಕಾಲಿಕ) ಮಾರುಕಟ್ಟೆ ನಿರ್ಮಾಣ ಮಾಡಲು ಜಮೀನು ನೀಡಿದ ಮುರಗೇಶ ಗುಂಜಾಳ ಅವರನ್ನು ಶಾಸಕ ಪ್ರಸಾದ ಅಬ್ಬಯ್ಯ ಸನ್ಮಾನಿಸಿದರು.