ಮೀಟಿಂಗ್ ನೋಟಿಸ್‌ಗೆ ಆಕ್ಷೇಪ

kpp meet
ಕೊಪ್ಪ ಪಟ್ಟಣ ಪಂಚಾಯಿತಿ ತುರ್ತು ಸಭೆಯಲ್ಲಿ ರೇಖಾ ಪ್ರಕಾಶ್, ಚಂದ್ರಕಾಂತ್, ಇದಿನಬ್ಬ ಇತರರಿದ್ದರು.
Published on

ಕೊಪ್ಪ: ಪಟ್ಟಣ ಪಂಚಾಯಿತಿ ತುರ್ತು ಸಭೆಯಲ್ಲಿ ಪ್ರಮುಖ ವಿಷಯ ಚರ್ಚೆಗೊಳ್ಳದೆ ಹೆಚ್ಚಿನ ಕಾಲ ವಾಗ್ವಾದ ನಡೆಯಿತು.

ಶನಿವಾರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಖಾ ಪ್ರಕಾಶ್ ಅವರು ಹುಚ್ಚುರಾಯರ ಕೆರೆ ಮೇಲ್ಬಾಗದಲ್ಲಿ ನಿರ್ಮಾಣವಾಗುತ್ತಿರುವ ಲೇಔಟ್ ಕಾಮಗಾರಿ ಬಗ್ಗೆ ಪ್ರಮುಖವಾಗಿ ಚರ್ಚಿಸಲು ತುರ್ತು ಸಭೆ ಕರೆದಿದ್ದರು. ಆದರೆ ಮೀಟಿಂಗ್ ನೋಟಿಸ್‌ನಲ್ಲಿ ಲೇಔಟ್ ಹೆಸರು ಕಾಣಿಸದೆ ಹುಚ್ಚುರಾಯರ ಕೆರೆ ಸಮೀಪ ನಿರ್ಮಾಣವಾಗುತ್ತಿರುವ ಕಾಮಗಾರಿ ಎಂದು ಮುದ್ರಿಸಿದ್ದರು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಕಾಂಗ್ರೆಸ್ ಸದಸ್ಯರು ಖಾಸಗಿ ಲೇಔಟ್‌ನ ಬಗ್ಗೆ ಚರ್ಚಿಸಲು ಮುಂದಾಗಿಲ್ಲ. ಆಡಳಿತಾರೂಢ ಬಿಜೆಪಿ ಎಷ್ಟೇ ಪ್ರಯತ್ನಪಟ್ಟರೂ ಸ್ವತಃ ಅಧ್ಯಕ್ಷರು ಆಗಿರುವ ತಪ್ಪನ್ನು ಒಪ್ಪಿಕೊಂಡರೂ ಚರ್ಚೆ ನಡೆಯಲಿಲ್ಲ.

ಕೆರೆ ಬಗ್ಗೆ ಚರ್ಚೆ ನಡೆಸಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ಕನಿಷ್ಠ 2 ಗಂಟೆ ಚರ್ಚೆ ನಡೆದಿದೆ. ಈ ಮಧ್ಯೆ ಅಧ್ಯಕ್ಷರು ಸಭೆಯನ್ನು 10 ನಿಮಿಷಕ್ಕೆ ಮುಂದಕ್ಕೆ ಸಹ ದೂಡಿದರು. 7 ಗಂಟೆಯಾದರೂ ಸಭೆ ಮುಗಿಯದ ಕಾರಣ ಕೆಲ ಸದಸ್ಯರು ಸಭೆ ಮುಗಿಸಿ ಎಂದು ಮನೆಗೆ ಹೊರಟು ನಿಂತಿದ್ದು ಕಂಡುಬಂತು.

ಕೊಪ್ಪದಲ್ಲಿ ಜಂಗಲ್ ಕ್ಲಿಯರ್ ಮಾಡಬೇಕು. ಕೆಲವೆಡೆ ವಿದ್ಯುತ್ ತಂತಿ ಮೇಲೆ ಮರದ ಕೊಂಬೆಗಳು ಇದ್ದು ಇದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಎಂದು ಪಪಂ ಸದಸ್ಯ ವಿಜಯಕುಮಾರ್ ಸಭೆಯ ಗಮನಕ್ಕೆ ತಂದರು. ಮೆಸ್ಕಾಂ ಜೆ.ಇ.ಶಶಿಕಾಂತ್ ರಾಥೋಡ್ ಮಾತನಾಡಿ, ಜಂಗಲ್ ಕ್ಲಿಯರ್ ಮಾಡಿದ್ದೇವೆ. ಸಮಸ್ಯೆಯಾದಾಗ ತಕ್ಷಣ ಸ್ಪಂದಿಸಿದ್ದೇವೆ ಎಂದರು. ಸ್ಥಾಯಿ ಸಮಿತಿ ಅಧ್ಯಕ್ಷ ಇದಿನಬ್ಬ ಮಾತನಾಡಿ, ಕೆಲವೆಡೆ ಮರಗಳು ಬಿದ್ದರೂ ತೆರವುಗೊಳಿಸಿಲ್ಲ. ಇದರಿಂದ ಜನರಿಗೆ ತೊಂದರೆಯಾಗಿದೆ ಎಂದು ಹೇಳಿದರು. ಪಪಂ ಅಧ್ಯಕ್ಷೆ ರೇಖಾ ಮಾತನಾಡಿ, ನಾಗಲಾಪುರದಲ್ಲಿನ ತುಂಗಾ ನದಿಯಿಂದ ಪಟ್ಟಣಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ. ದಿನಗಟ್ಟಲೇ ವಿದ್ಯುತ್ ಪೂರೈಕೆಯಾಗದಿದ್ದರೆ ಸಮಸ್ಯೆ ಉದ್ಭವಿಸುತ್ತದೆ. ಹೆಚ್ಚಾಗಿ ವಿದ್ಯುತ್ ಕಾರಣದಿಂದ ಕೆಲ ದಿನ ನೀರು ಪೂರೈಕೆಯಲ್ಲಿ ಸಮಸ್ಯೆಯಾಗಿದೆ ಎಂದರು. ಈ ವೇಳೆ ಶಶಿಕಾಂಥ್ ರಾಥೋಡ್ ಮಾತನಾಡಿ, ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು. ಮೈತ್ರಾ ಗಣೇಶ್ ಹಾಗೂ ಸಂದೇಶ್ ಮಾತನಾಡಿ, ಕೊಪ್ಪ ಸುಭಾಷ್ ರಸ್ತೆ, ದ್ಯಾವೇಗೌಡ ವೃತ್ತದ ಬಳಿ ಗಾಳಿ ಬಂದರೆ ವಿದ್ಯುತ್ ತಂತಿಗಳು ಒಂದಕ್ಕೊಂದು ತಾಗಿ ಬೆಂಕಿ ಬರುತ್ತದೆ. ಈ ಬಗ್ಗೆ ಮೆಸ್ಕಾಂ ಗಮನವಹಿಸಬೇಕು ಎಂದು ಸಭೆಗೆ ತಿಳಿಸಿದರು.

ಕುಡಿಯುವ ನೀರಿಗೆ 29 ಕೋಟಿ ರೂ. ಕ್ರಿಯಾ ಯೋಜನೆ ಆಗಿದೆ ಆಗಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಟೆಂಡರ್ ಕರೆದಿದೆ ಎಂದು ಮುಖ್ಯಾಧಿಕಾರಿ ಚಂದ್ರಕಾಂತ್ ಸಭೆಗೆ ತಿಳಿಸಿದರು. ಸದಸ್ಯ ಸಂದೇಶ್ ಮಾತನಾಡಿ, ಕ್ರಿಯಾಯೋಜನೆ, ಕೆಲಸದ ಸಂಪೂರ್ಣ ಮಾಹಿತಿ ಸದಸ್ಯರಿಗೆ ನೀಡಬೇಕು. ಗುತ್ತಿಗೆದಾರರು ಮನಸೋಇಚ್ಛೆ ಕೆಲಸ ಮಾಡಿದರೆ ಸಮಸ್ಯೆಯಾಗುತ್ತದೆ ಎಂದರು.

ಇತ್ತೀಚೆಗೆ ಹುಚ್ಚುರಾಯರ ಕೆರೆಯಿಂದ ಪೂರೈಕೆ ಮಾಡಿದ ನೀರು ಕುಲುಷಿತವಾಗಿತ್ತು. ಆಗ ಲ್ಯಾಬ್ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ನೀಡಿತ್ತು. ಇದರ ಹಿಂದೆ ಕೆಲ ಕಿಡಿಗೇಡಿಗಳ ಕೈವಾಡವಿದೆ. ಹುಚ್ಚುರಾಯರ ಕೆರೆಯ ನೀರು ಶುದ್ಧವಾಗಿಲ್ಲ ಎಂದು ಬಿಂಬಿಸುವ ಉದ್ದೇಶದಿಂದ ಈ ಕೆಲಸ ಮಾಡಿದ್ದಾರೆ. ಆದ್ದರಿಂದ ತನಿಖೆ ನಡೆಸಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಇದಿನಬ್ಬ ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ವಿಜಯಕುಮಾರ್, ರಶೀದ್ ಹಲವು ದಶಕಗಳಿಂದ ಹುಚ್ಚುರಾಯರ ಕೆರೆ ನೀರನ್ನು ಬಳಸುತ್ತಿದ್ದೇವೆ. ಈ ವರ್ಷ ಸಮಸ್ಯೆಯಾಗಿದೆ ಎಂದರೇ ಕೈವಾಡ ಇರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ನಡೆದರೆ ಒಳಿತು ಎಂದರು. ಸರ್ವ ಸದಸ್ಯರು ಈ ತನಿಖೆಗೆ ಒಪ್ಪಿಗೆ ಸೂಚಿಸಿದರು. ಮುಖ್ಯಾಧಿಕಾರಿ ಚಂದ್ರಕಾಂತ್ ತನಿಖೆ ಮಾಡುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net