ಮೀಟರ್ ರೀಡರ್ ಮೇಲೆ ಒತ್ತಡ ಹೇರುವುದು ಸಲ್ಲ

MDG mescom
ಮೂಡಿಗೆರೆ ಮೆಸ್ಕಾಂ ಕಚೇರಿಯಲ್ಲಿ ಅಧಿಕಾರಿ ಜಾವಿದ್ ಹುಸೇನ್ ಅವರಿಗೆ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಕೆ.ಭರತ್ ಮನವಿ ನೀಡಿದರು. ಜೆ.ಸಿ.ಪ್ರವೀಣ್‌ಕುಮಾರ್, ಎ.ಎನ್.ಸವಿನ್, ಕೃಷ್ಣಪ್ಪ, ಎಂ.ಆರ್.ಕೃಷ್ಣ ಇತರರಿದ್ದರು.
Published on

ಮೂಡಿಗೆರೆ: ವಿದ್ಯುತ್ ಬಿಲ್ ನೀಡಲು ಮನೆ ಮನೆಗೆ ತೆರಳುವವರಿಗೆ ಮಾಸಿಕ 15 ದಿನದಲ್ಲಿ ಪೂರ್ಣ ಬಿಲ್ ನೀಡುವಂತೆ ಹಾಗೂ ಶೇ.100 ಪ್ರೋಬ್ ರೀಡಿಂಗ್ ನಿರ್ವಹಿಸುವಂತೆ ಒತ್ತಡ ಹೇರುವುದು ಸರಿಯಲ್ಲ ಎಂದು ಕೆಪಿಟಿಸಿಎಲ್ ನೌಕರರ ಸಂಘದ ರಾಜ್ಯಾಧ್ಯಕ್ಷ ಕೆ.ಭರತ್ ಒತ್ತಾಯಿಸಿದರು.

ಮೆಸ್ಕಾಂ ಕಚೇರಿಗೆ ಸೋಮವಾರ ಭೇಟಿ ನೀಡಿ ಅಧಿಕಾರಿಗಳಾದ ಜಾವಿದ್ ಹುಸೇನ್ ಅವರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಗುತ್ತಿಗೆ ಆಧಾರದ ಮೀಟರ್ ರೀಡರ್‌ಗಳಿಗೆ 15 ದಿನದಲ್ಲಿ ಮೀಟರ್ ರೀಡಿಂಗ್ ಕರ್ತವ್ಯ ಪೂರ್ಣಗೊಳಿಸುವಂತೆ ಮೆಸ್ಕಾಂ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಗುಡ್ಡಗಾಡು ಪ್ರದೇಶದಲ್ಲಿ ಪ್ರತಿ ತಿಂಗಳೂ 15 ದಿನದಲ್ಲಿ ಮೀಟರ್ ರೀಡ್ ಮಾಡಲು ಸಾಧ್ಯವಿಲ್ಲ. ಒಂದೊಂದು ರೀಡಿಂಗ್ ಸ್ಥಳಕ್ಕೆ 15 ರಿಂದ 20 ಕಿ.ಮೀ ದೂರ ಹೋಗಬೇಕಾದರೆ ಬೈಕ್‌ಗೆ 100 ರೂ. ಪೆಟ್ರೋಲ್ ಬೇಕಾಗುತ್ತದೆ. ವಿದ್ಯುತ್ ಕಡಿತಗೊಂಡರೆ ಕರ್ತವ್ಯ ಸ್ಥಗಿತವಾಗುತ್ತದೆ. ಇದರಿಂದ ಪ್ರತಿದಿನ 100 ಮನೆಗೆ ಬಿಲ್ ನೀಡಲು ಸಾಧ್ಯವಾಗುತ್ತಿಲ್ಲ ಎಂದರು.

ಹಲವು ನ್ಯೂನ್ಯತೆಗಳನ್ನು ಸರಿಪಡಿಸಿ ಮೆಸ್ಕಾಂ ನಿಗದಿಪಡಿಸಿದ ದಿನದೊಳಗೆ ರೀಡಿಂಗ್ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ರೀಡರ್‌ಗಳಿಗೆ ಸಿಗುವ ಮಾಸಿಕ ವೇತನದಲ್ಲಿ ಪೆಟ್ರೋಲ್, ಊಟ, ತಿಂಡಿ, ರೀಡರ್‌ಗಳ ಕುಟುಂಬದ ಜೀವನಕ್ಕೆ ಸಾಕಾಗುತ್ತಿಲ್ಲ. ಮೆಸ್ಕಾಂ ನ್ಯೂನ್ಯತೆಗಳಿಗೆ ರೀಡರ್‌ಗಳ ವೇತನ ಕಡಿತಗೊಳಿಸಲಾಗುತ್ತದೆ. ನ್ಯೂನ್ಯತೆಯಿರುವ ಮೀಟರ್‌ಗಳನ್ನು ಪರೀಕ್ಷಿಸಿ ಬಿಲ್ ನೀಡದೆ ಹಿಂದಿರುಗಿದರೂ ವೇತನ ಕಡಿತಗೊಳಿಸಲಾಗುತ್ತದೆ. ಇದು ಸರಿಯಲ್ಲ. ಮೀಟರ್ ರೀಡರ್‌ಗಳಿಗೆ ವೇತನ ಹೆಚ್ಚಿಸಬೇಕು. ರೀಡರ್‌ಗಳಿಗೆ ಸೂಚಿಸುವ ಕೆಲಸ ಹೊರತುಪಡಿಸಿ ಅಧಿಕಾರಿಗಳು ಇತರ ಕೆಲಸ ಮಾಡಿಸಿದ್ದಲ್ಲಿ ವೇತನ ಎರಡರಷ್ಟು ಹೆಚ್ಚು ನೀಡಬೇಕು ಎಂದು ಆಗ್ರಹಿಸಿದರು.

ಗಣತಿ ವೇಳೆ ಮನೆಗಳಿಗೆ ವಿಳಾಸದ ಚೀಟಿ ಅಂಟಿಸುವ ಕೆಲಸ ನೀಡಲಾಗಿದೆ. ಆಗ ಎರಡು ಕೆಲಸ ನಿಭಾಯಿಸಿದ್ದಾರೆ. ವೇತನ ಹೆಚ್ಚು ನೀಡಿಲ್ಲ. ಗಣತಿ ಕರ್ತವ್ಯಕ್ಕೆ ಪ್ರತಿದಿನ ಹೆಚ್ಚುವರಿ 600 ರೂಪಾಯಿ ಸಿಬ್ಬಂದಿಗೆ ಪಾವತಿಸಬೇಕು. ಮೆಸ್ಕಾಂಗೆ ಹೊರಗುತ್ತಿಗೆ ನೌಕರರನ್ನು ನೀಡಿದ ಗುತ್ತಿಗೆದಾರರು, ಇಲಾಖೆಯ ನ್ಯೂನ್ಯತೆಗಳನ್ನು ಮರೆಮಾಚಿದ್ದಾರೆ. ಗುತ್ತಿಗೆದಾರರಿಗೆ ಹಣವೇ ಮುಖ್ಯವಾಗಿದೆ. ಅಧಿಕಾರಿಗಳು ಅಥವಾ ಗುತ್ತಿಗೆದಾರರು ನೌಕರರ ಮೇಲೆ ಒತ್ತಡ ಹೇರಿದರೆ ಗುತ್ತಿಗೆ ನೌಕರರು ಕರ್ತವ್ಯದಿಂದ ಹಿಂದಕ್ಕೆ ಸರಿಯಬೇಕಾಗುತ್ತದೆ. ಇದರಿಂದ ಆಗುವ ಸಮಸ್ಯೆಗಳಿಗೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಹೊಣೆಯಾಗಿರುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಸಂಘದ ಗೌರವಾಧ್ಯಕ್ಷ ಜೆ.ಸಿ.ಪ್ರವೀಣ್‌ಕುಮಾರ್, ಕಾರ್ಯದರ್ಶಿ ಆರ್.ಆನಂದ ರಾವ್, ಎ.ಎನ್.ಸವಿನ್, ಸಹ ಕಾರ್ಯದರ್ಶಿ ಎಚ್.ಎಂ.ಶಶಿ, ಕೃಷ್ಣಪ್ಪ, ಪಾಲಾಕ್ಷ, ಮಹೇಶ್, ಎಂ.ಆರ್.ಕೃಷ್ಣ, ರಂಜಿತ್, ಅಶೋಕ್, ಸತೀಶ್, ಗೋಪಾಲ, ಬಿ.ಸಿ.ರಂಜಿತ್, ಎಚ್.ಎಂ.ಶಶಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net