

ಕಾರವಾರ: ಕರೊನಾ ಪರಿಸ್ಥಿತಿ ಇದ್ದಲ್ಲೇ ಉದ್ಯೋಗ ಕಂಡುಕೊಳ್ಳುವ ಅನಿವಾರ್ಯತೆ ಹಾಗೂ ಅವಕಾಶವನ್ನು ಹುಟ್ಟುಹಾಕಿದೆ.
ಜಿಲ್ಲೆಯಲ್ಲಿ ಮೀನುಗಾರಿಕೆ ಕ್ಷೇತ್ರದಲ್ಲಿ ಈಗ ವಲಸೆ ಕಾರ್ವಿುಕರ ಬದಲು ಸ್ಥಳೀಯ ಕಾರ್ವಿುಕರಿಗೆ ಆದ್ಯತೆ ದೊರೆಯಲಾರಂಭಿಸಿದೆ. ಜಿಲ್ಲೆಯ ಕಾರ್ವಿುಕರು ಹೊರ ಊರಿಗೆ ಹೋಗುವುದು, ಹೊರ ಜಿಲ್ಲೆ, ರಾಜ್ಯಗಳ ಕಾರ್ವಿುಕರು ಇಲ್ಲಿಗೆ ಬಂದು ದುಡಿಯುವ ವಿಚಿತ್ರ ಪದ್ಧತಿಗೆ ಈ ಬಾರಿ ಕರೊನಾ ತಡೆಯೊಡ್ಡಿದೆ.
ಕೋವಿಡ್ ಕಾರಣದಿಂದ ಸ್ವಂತ ಊರುಗಳಿಗೆ ತೆರಳಿದ ಹೊರ ರಾಜ್ಯ, ಜಿಲ್ಲೆಗಳ ಕಾರ್ವಿುಕರು ವಾಪಸ್ ಬರಲು ಒಪ್ಪುತ್ತಿಲ್ಲ. ಬಂದರೂ ಅವರ ಆರೋಗ್ಯ ತಪಾಸಣೆ, ಕ್ವಾರಂಟೈನ್ ಎಂಬೆಲ್ಲ ನಿಯಮಾವಳಿಗಳಿಂದ ಹೊರೆಯಾಗಲಿದೆ ಎಂಬ ಆತಂಕವೂ ಮಾಲೀಕರಲ್ಲಿದೆ.ಇದರಿಂದ ಸ್ಥಳೀಯ ಕಾರ್ವಿುಕರನ್ನು ಬಳಸಿ ಮೀನುಗಾರಿಕೆ ನಡೆಸಲು ಮಾಲೀಕರು ಮುಂದಾಗುತ್ತಿದ್ದಾರೆ.
ಎಷ್ಟು ಕಾರ್ವಿುಕರು?: ಜಿಲ್ಲೆಯ ಭಟ್ಕಳ, ತೆಂಗಿನಗುಂಡಿ, ಹೊನ್ನಾವರ, ತದಡಿ, ಬೇಲೆಕೇರಿ, ಮುದಗಾ ಸೇರಿ ವಿವಿಧ ಬಂದರುಗಳಲ್ಲಿ ಪರ್ಸೀನ್, ಟ್ರಾಲರ್, ಮಲ್ಟಿ ಡೇ ಟ್ರಾಲರ್ ಸೇರಿ 1200 ರಷ್ಟು ದೊಡ್ಡ ಬೋಟ್ಗಳಿವೆ. ಅದರಲ್ಲಿ ಕಾರ್ಯನಿರ್ವಹಿಸಲು 10 ಸಾವಿರ ಕಾರ್ವಿುಕರ ಅವಶ್ಯಕತೆ ಇದೆ. ಇಷ್ಟೇ ಅಲ್ಲ, ಮೀನು ಇಳಿಸುವುದು ಲೋಡ್ ಮಾಡುವುದು, ಐಸ್ ತುಂಬುವುದು ಹೀಗೆ ವಿವಿಧ ಕಾರ್ಯಗಳಿಗಾಗಿ ಮತ್ತಷ್ಟು ಕಾರ್ವಿುಕರು ಬೇಕಾಗಿದ್ದಾರೆ. ಒರಿಸ್ಸಾ, ಜಾರ್ಖಂಡ್, ಬಿಹಾರ ಹಾಗೂ ಕರ್ನಾಟಕದ ಉತ್ತರ ಕರ್ನಾಟಕ ಭಾಗದಿಂದ ಜಿಲ್ಲೆಗೆ 7 ಸಾವಿರ ಕಾರ್ವಿುಕರು ಆಗಮಿಸುತ್ತಿದ್ದರು.
ಜಿಲ್ಲೆಯ ಭಟ್ಕಳ, ಕುಮಟಾ, ಹೊನ್ನಾವರ ಹಾಗೂ ಅಂಕೋಲಾಗಳ 5 ಸಾವಿರಕ್ಕೂ ಅಧಿಕ ಮೀನುಗಾರರು ಹಾಗೂ ಇತರ ವರ್ಗದವರು ದೋಣಿಯಲ್ಲಿ ಹಾರೆಮನ್ಗಳಾಗಿ ಕಾರ್ಯನಿರ್ವಹಿಸಲು ಮಂಗಳೂರು, ಮಲ್ಪೆ, ಇತ್ತ ಗೋವಾ, ಮಹಾರಾಷ್ಟ್ರದ ರತ್ನಾಗಿರಿಗೆ ತೆರಳುತ್ತಿದ್ದರು.
ಸಮುದ್ರ ಪೂಜೆ: ಆ.1 ರಿಂದ ಆಳ ಸಮುದ್ರ ಮೀನುಗಾರಿಕೆಗೆ ಅವಕಾಶವಿದ್ದು, ಕಾರವಾರ ಬೈತಖೋಲ್ ಬಂದರಿನಿಂದ 70 ಟ್ರಾಲರ್ ಹಾಗೂ ಮಲ್ಟಿ ಟ್ರಾಲರ್ ಬೋಟ್ಗಳು ಹೊರಡಲು ಸಜ್ಜಾಗಿವೆ. ಜಿಲ್ಲೆಯ ವಿವಿಧ ಊರುಗಳಿಂದ ಸುಮಾರು 500 ಕಲಾಸಿಗಳು ಶುಕ್ರವಾರ ಆಗಮಿಸಿದರು. ಅವರ ಆರೋಗ್ಯ ತಪಾಸಣೆ ನಡೆಸಲಾಯಿತು. ಸಮುದ್ರ ಹಾಗೂ ಬೋಟ್ ಪೂಜೆ ನಡೆಸಲಾಯಿತು. ಆ.6 ರಿಂದ ಪರ್ಸೀನ್ ಬೋಟ್ಗಳು ನೀರಿಗೆ ಇಳಿಯಲಿವೆ.
ಗೋವಾ, ಮಹಾರಾಷ್ಟ್ರ ಮಂಗಳೂರುಗಳಿಗೆ ತೆರಳಲು ಕರೊನಾ ಕಾರಣದಿಂದ ಜಿಲ್ಲೆಯ ಕಾರ್ವಿುಕರು ಹೆದರುತ್ತಿದ್ದಾರೆ. ಇದರಿಂದ ಇಲ್ಲಿಯೇ ಉದ್ಯೋಗ ಕಂಡುಕೊಳ್ಳುತ್ತಿದ್ದಾರೆ. ರಾಜು ತಾಂಡೇಲ ಮೀನುಗಾರರ ಮುಖಂಡ