

ಗಜೇಂದ್ರಗಡ: ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿಗೇರಿ ಕೆರೆಯಲ್ಲಿ ಎರಡು ದಿನಗಳಿಂದ ಸಾವಿರಾರು ಮೀನುಗಳು ಸತ್ತಿದ್ದು ಸುತ್ತಲಿನ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗದ ಭೀತಿ ಉಂಟಾಗಿದೆ.
ಜಿಗೇರಿ ಕೆರೆ 151 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು, 22.41 ಎಂ.ಸಿ.ಎಫ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 2008ರ ಬಳಿಕ ಕೆರೆ ಸಂಪೂರ್ಣ ತುಂಬಿತ್ತು. ಪರಿಣಾಮ ಮಂಜುನಾಥ ಮೀನುಗಾರಿಕೆ ಸಹಕಾರ ಸಂಘದ ಸದಸ್ಯರು ಲಕ್ಷಾಂತರ ರೂ. ವೆಚ್ಚ ಮಾಡಿ ಮೀನಿನ ಮರಿಗಳನ್ನು ಬಿಟ್ಟು, ಸಾಕಾಣಿಕೆ ಮಾಡುತ್ತಿದ್ದರು. ಮೀನುಗಳು ಚೆನ್ನಾಗಿ ಬೆಳೆದಿದ್ದು, ಉತ್ತಮ ಲಾಭ ತಂದುಕೊಡುವಂತಿದ್ದವು. ಆದರೆ, ಕಳೆದ ಎರಡು ದಿನಗಳಿಂದ ಮೀನುಗಳು ನಿಗೂಢ ರೀತಿಯಲ್ಲಿ ಸಾಯುತ್ತಿದ್ದು, ಗುತ್ತಿಗೆದಾರನಿಗೆ ದಿಕ್ಕು ತೋಚದಂತಾಗಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಬಹುತೇಕರು ಜಿಗೇರಿ ಕೆರೆಯಲ್ಲಿ ಈಜಾಡಲು ಬರುತ್ತಿದ್ದರು. ಅವರಿಂದ ಯಾವುದಾದರೂ ರೋಗ ಹರಡಿರಬಹುದೇ? ಕೆರೆ ಸಮೀಪದ ಕೋಳಿ ಫಾರಂ ಇದ್ದು, ಅದರಿಂದ ಬಂದ ತಾಜ್ಯ ಸಾವಿಗೆ ಕಾರಣವಾಗಿದೆಯಾ? ಎಂಬಿತ್ಯಾದಿ ಪ್ರಶ್ನೆಗಳು ಗ್ರಾಮಸ್ಥರಲ್ಲಿ ಮೂಡಿವೆ. ನೂರಾರು ಕುರಿಗಾಹಿಗಳು ಗುಡ್ಡದಲ್ಲಿ ಕುರಿ ಮೇಯಿಸಿ ಇದೇ ಕೆರೆಯ ನೀರನ್ನು ಕುರಿಗಳಿಗೆ ಕುಡಿಸುತ್ತಿದ್ದರು. ರೈತರು ಜಾನುವಾರುಗಳ ದಾಹ ತಣಿಸಲು ಜಿಗೇರಿ ಕೆರೆಯನ್ನೇ ಅವಲಂಬಿಸಿದ್ದಾರೆ. ಕೆರೆಯಲ್ಲಿದ್ದ ಮೀನುಗಳು ಸತ್ತು ದಡದಲ್ಲಿ ತೇಲುತ್ತಿರುವುದನ್ನು ಕಂಡು ರೈತರು, ಕುರಿಗಾಹಿಗಳಲ್ಲಿ ಆತಂಕ ಮೂಡಿದೆ. ಈಗಾಗಲೇ ಅಂದಾಜು ಮೂರು ಸಾವಿರಕ್ಕೂ ಹೆಚ್ಚು ಮೀನುಗಳು ಸತ್ತಿವೆ ಎನ್ನಲಾಗುತ್ತಿದೆ. ಸರ್ಕಾರ ಪರಿಹಾರ ನೀಡಬೇಕು, ಇಲ್ಲದಿದ್ದರೆ ಮೀನು ಮರಿಗಳನ್ನಾದರೂ ನೀಡಬೇಕು ಎಂದು ಗುತ್ತಿಗೆದಾರರು ಮನವಿ ಮಾಡಿದ್ದಾರೆ.
ಆಮ್ಲಜನಕದ ಕೊರತೆ: ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದರಿಂದ ಸತ್ತಿರಬೇಕು ಎಂದು ಅಂದಾಜಿಸಲಾಗಿದೆ. ತಕ್ಷಣ ಸತ್ತ ಮೀನುಗಳನ್ನು ಹೂಳಬೇಕು. ಜತೆಗೆ ಕೆರೆಯಲ್ಲಿರುವ ಮೀನುಗಳನ್ನು ಹಿಡಿದು ಮಾರಾಟ ಮಾಡಬೇಕು. ಆಗ ಕೆರೆಯಲ್ಲಿನ ಮೀನುಗಳ ಪ್ರಮಾಣ ಕಡಿಮೆಯಾಗಿ ಉಸಿರಾಟಕ್ಕೆ ಅನುಕೂಲವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈಗ ಲಾಕ್ಡೌನ್ ಇರುವುದರಿಂದ ಮೀನು ಮಾರಾಟ ಕೂಡ ಕಷ್ಟವಾಗಲಿದೆ. ಈ ಸಂದರ್ಭದಲ್ಲಿ ಮೀನುಗಳು ಸಾಯುತ್ತಿರುವುದು ಆತಂಕ ಹೆಚ್ಚಿಸಿದೆ. ಮಳೆ ಬಂದಾಗ ಹೊಸ ನೀರು ಹರಿದು ಬರುವುದರಿಂದ ಈ ರೀತಿ ಮೀನುಗಳು ಮರಣ ಹೊಂದುತ್ತವೆ ಎಂದೂ ತಜ್ಞರು ಹೇಳುತ್ತಿದ್ದಾರೆ.
ಆದಾಯಕ್ಕೆ ಕೊಕ್ಕೆ: 2019-20ನೇ ಸಾಲಿನಲ್ಲಿ ಜಿಗೇರಿ ಕೆರೆ 10,603 ರೂ.ಗೆ ಟೆಂಡರ್ ಆಗಿದೆ. ಕಾಟ್ಲಾ, ಗೆಂಡೆ, ರೋಹು, ಮೈಗಾಲ್, ಹುಲ್ಲುಗಂಡೆ, ಬಿಳ್ಳಿಗೆಂಡೆ ಹಾಗೂ ಇತರ ತಳಿಗಳ ಮೀನುಗಳು ಕೆರೆಯಲ್ಲಿವೆ. ಮೀನುಗಳಿಗೆ ಭಾರಿ ಬೇಡಿಕೆ ಮತ್ತು ಗುಣಮಟ್ಟದಿಂದ ಕೂಡಿರುವುದರಿಂದ ಹುಬ್ಬಳ್ಳಿ, ದಾವಣಗೆರೆ, ರಾಯಚೂರು, ಭದ್ರಾವತಿ, ಸವದತ್ತಿಗಳಲ್ಲಿನ ಟೆಂಡರ್ಗಳಲ್ಲಿ ದಲ್ಲಾಳಿಗಳು ಮುಗಿಬಿದ್ದು ಖರೀದಿಸುತ್ತಾರೆ. ಪ್ರತಿದಿನ 2ರಿಂದ 3 ಕ್ವಿಂಟಾಲ್ ಮೀನು ಹಿಡಿದು 6 ರಿಂದ 9 ಸಾವಿರ ರೂ.ವರೆಗೆ ಮಾರಾಟ ಮಾಡುತ್ತಿದ್ದರು. ಪ್ರಸ್ತುತ ಉತ್ತಮ ಮಳೆಯಾಗಿ ಕೆರೆ ತುಂಬಿದೆ. ಮೀನುಗಳು ಸಮೃದ್ಧವಾಗಿ ಬೆಳೆದಿವೆ. ಆದರೆ, ಮೀನುಗಳ ಸಾವು ಗುತ್ತಿಗೆದಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಮೀನುಗಳ ಸಾವಿಗೆ ನಿಖರ ಕಾರಣ ತಿಳಿದಿಲ್ಲ. ಈ ಕುರಿತು ಅಧಿಕಾರಿಗಳು ಪರಿಶೀಲಿಸಬೇಕು. ಸತ್ತ ಮೀನುಗಳ ತೆರವಿಗೆ ಗ್ರಾ.ಪಂ ಮುಂದಾಗಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.
ಜಿಗೇರಿ ಕೆರೆಯಲ್ಲಿ ಮೀನುಗಳು ಸತ್ತಿರುವ ಕುರಿತು ಗುತ್ತಿಗೆದಾರರು ಗಮನಕ್ಕೆ ತಂದಿಲ್ಲ. ಅತಿಯಾದ ಬಿಸಿಲು ಮತ್ತು ಇತ್ತೀಚೆಗೆ ಸುರಿದ ಮಳೆಯಿಂದ ನೀರಿನಲ್ಲಿ ಆಮ್ಲಜನಕ ವ್ಯತ್ಯಾಸವಾಗಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚು. ಕೋಳಿಫಾರಂ ತ್ಯಾಜ್ಯದಿಂದ ಯಾವುದೇ ಸಮಸ್ಯೆಯಿಲ್ಲ. | ಬಿ.ಜೆ. ದೀಪಶ್ರೀ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ
ಕಳೆದ ನಾಲ್ಕೈದು ವರ್ಷಗಳಿಂದ ಸಮರ್ಪಕ ಮಳೆ ಕೊರತೆಯಿಂದ ಕೆರೆಯಲ್ಲಿ ನೀರು ಇಲ್ಲದ್ದರಿಂದ ಟೆಂಡರ್ ಹಾಕಿ ನಷ್ಟ ಅನುಭವಿಸಿದ್ದೇವೆ. ಪ್ರಸ್ತುತ ಕೆರೆ ತುಂಬಿದ್ದರಿಂದ ಭರ್ಜರಿ ಇಳುವರಿ, ವಿವಿಧ ತಳಿಗಳ ಲಕ್ಷಾಂತರ ಮೀನು ಮರಿಬಿಟ್ಟಿದ್ದವು. ಮೀನುಗಳ ಸಾವಿನಿಂದ ದಿಕ್ಕೇ ತೋಚದಂತಾಗಿದೆ. | ವಾಸುದೇವ ಮಾಳೋತ್ತರ, ಮಂಜುನಾಥ ಮೀನುಗಾರಿಕೆ ಸಹಕಾರ ಸಂಘದ ಅಧ್ಯಕ್ಷ
ಕೆರೆಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಈ ಕುರಿತು ನೀರಾವರಿ ಇಲಾಖೆಯ ಗಮನಕ್ಕೂ ತರಲಾಗುವುದು. ಅಲ್ಲದೆ, ವಿಷದಿಂದ ಮೃತಪಟ್ಟಿವೆಯೇ ಎಂದೂ ಪರಿಶೀಲಿಸಲಾಗುವುದು. ಸಾಂಕ್ರಾಮಿಕ ರೋಗ ಹರಡುವ ಹಿನ್ನೆಲೆಯಲ್ಲಿ ಸತ್ತ ಮೀನುಗಳ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತದೆ.| ಎಸ್.ಎಸ್.ಕಡಬಲಕಟ್ಟಿ, ಪಿಡಿಒ, ಕುಂಟೋಜಿ