

ವಿಜಯವಾಣಿ ವಿಶೇಷ ಮೈಸೂರು
ಲಸಿಕೆ ವಂಚಿತರಿಗೆ ಲಚಿಕೆ ನೀಡುವ ಮಹಾ ಅಭಿಯಾನ ‘ಮಿಷನ್ ಇಂದ್ರಧನುಷ್’ಗೆ ಜಿಲ್ಲೆಯಲ್ಲಿ ಸಿದ್ಧತೆ ನಡೆದಿದ್ದು, ಸಮೀಕ್ಷೆಗೆ ಕ್ಷಣಗಣನೆ ಆರಂಭಗೊಂಡಿದೆ. ತಾಯಿ ಮತ್ತು ಮಗುವಿನ ಗಂಭೀರ ಕಾಯಿಲೆಗಳ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಮತ್ತು ರಕ್ಷಣೆ ನೀಡುವ ಸಲುವಾಗಿ ಕೇಂದ್ರ ಸರ್ಕಾರದಿಂದ ಈ ಮಹಾ ಅಭಿಯಾನ ನಡೆಯುತ್ತಿದೆ.
ಜಿಲ್ಲೆಯಲ್ಲಿ ಮೂರು ಹಂತದಲ್ಲಿ ಲಸಿಕೆ ನೀಡಲಾಗುತ್ತಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಗರಪಾಲಿಕೆ ಸಹಯೋಗದಲ್ಲಿ ಮನೆ-ಮನೆ ಸರ್ವೆ ಕಾರ್ಯ ನಡೆಸಿ ಯಾರು ಲಸಿಕೆಯಿಂದ ವಂಚಿತರಾಗಿದ್ದಾರೆ ಎನ್ನುವ ಮಾಹಿತಿ ಕಲೆ ಹಾಕಲಾಗುತ್ತದೆ.
ಲಸಿಕೆ ಪಡೆಯದೆ ಬಿಟ್ಟು ಹೋದ ಐದು ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ಇಂದ್ರ ಧನುಷ್ ಅಭಿಯಾನದಲ್ಲಿ ನಿಗದಿತ ಲಸಿಕಾ ಕೇಂದ್ರಗಳಲ್ಲಿ ರಾಷ್ಟ್ರೀಯ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದಡಿ ಉಚಿತವಾಗಿ ಲಸಿಕೆ ನೀಡಲಾಗುವುದು. ಗಂಭೀರ ಕಾಯಿಲೆಗಳಾದ ಪೋಲಿಯೋ ಇನ್ನಿತರ ಕಾಯಿಲೆಗಳಿಂದ ರಕ್ಷಣೆ ಪಡೆಯಲು ಎರಡು ವರ್ಷದ ಮಕ್ಕಳು ಲಸಿಕೆ ಪಡೆಯುವುದು ಅತಿ ಮುಖ್ಯ. ಈ ರೋಗಗಳಿಂದ ಮರಣ ತಪ್ಪಿಸಲು ಎಲ್ಲ ಸಿದ್ಧತೆ, ಪರೀಕ್ಷೆಯೊಂದಿಗೆ ಈ ಲಸಿಕೆಯನ್ನು ನೀಡಲಾಗುತ್ತಿದೆ.
ಜಾಗತಿಕವಾಗಿ ತಲ್ಲಣಗೊಳಿಸಿದ ಕೋವಿಡ್ ಮಹಾಮಾರಿ ದಾಳಿಯ ಬಳಿಕ ಸಾಂಕ್ರಾಮಿಕ ಕಾಯಿಲೆಗಳಿಂದ ರಕ್ಷಿಸಲು ಸಜ್ಜುಗೊಳ್ಳುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶಗಳಲ್ಲಿ ಒಂದಾಗಿದೆ.
ಸಶಕ್ತ, ಆರೋಗ್ಯ ಭಾರತ ನಿರ್ಮಾಣಕ್ಕೆ ಮಿಷನ್ ಇಂದ್ರಧನುಷ್ ಯಶಸ್ವಿ ಅನುಷ್ಠಾನಕ್ಕಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಯುನಿಸೆಫ್, ಡಬ್ಲು್ಲೃಎಚ್‌ಒ, ಅಂತಾರಾಷ್ಟ್ರೀಯ ರೋಟರಿ ಸೇರಿದಂತೆ ಇನ್ನಿತರ ಪಾಲದಾರರೊಂದಿಗೆ 2015ರಿಂದ ಮುನ್ನಡಿ ಇಟ್ಟಿದೆ.
ಅಭಿಯಾನವನ್ನು ಅರ್ಹರಿಗೆ ಮುಟ್ಟಿಸುವ ಉದ್ದೇಶದಿಂದ ಮುಂಚೂಣಿಯ ಆರೋಗ್ಯ ಕಾರ್ಯಕರ್ತರು, ಆಶಾ ಅಂಗನವಾಡಿ ಕಾರ್ಯಕರ್ತರು, ಪಾಲಿಕೆ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ.
ಮನೆ-ಮನೆ ಸಮೀಕ್ಷೆ ಕಾಲದಲ್ಲಿ ಯಾವ ಮಕ್ಕಳು ಯಾವ ಲಸಿಕೆ ಎಷ್ಟು ಡೋಸ್ ಪಡೆದಿದ್ದಾರೆ, ಬಾಕಿ ಇರುವ ಲಸಿಕೆ ಯಾವುದು ಅಥವಾ ಒಂದೂ ಲಸಿಕೆ ಪಡೆಯದೆ ಇರುವ ಮಕ್ಕಳು ಎಷ್ಟು ಎನ್ನುವುದನ್ನು ಗುರುತಿಸಲಾಗುತ್ತದೆ.
ನಗರ ಪ್ರದೇಶ ಅಲ್ಲದೆ ಹೊರ ವಲಯಗಳು, ಮೊಹಲ್ಲಾ, ಕೊಳಗೇರಿ ಪ್ರದೇಶಗಳು, ಅಲ್ಲದೆ ದಡಾರ, ಗಂಟಲು ಮಾರಿ ಮತ್ತು ಧನುರ್ವಾಯು ಪ್ರಕರಣಗಳು ವರದಿಯಾದ ಪ್ರದೇಶಗಳು, ಹೆಚ್ಚು ಸಾಂಕ್ರಾಮಿಕ ರೋಗಗಳು ವರದಿಯಾಗುವ ಪ್ರದೇಶ, ಲಸಿಕೆಯನ್ನು ವಿರೋಧಿಸುವ ಪ್ರದೇಶಗಳಲ್ಲಿ ಈ ಅಭಿಯಾನವನ್ನು ಬಿರುಸಾಗಿ ನಡೆಸಲಾಗುತ್ತಿದೆ.
ಯಾವ ಕಾಯಿಲೆಗಳಿಗೆ ಲಸಿಕೆ?
ಇಂದ್ರಧನುಷ್ ಯೋಜನೆಯಡಿ ಐದು ವರ್ಷದೊಳಗಿನ ಮಕ್ಕಳಿಗೆ ಬರುವ ಏಳು ಕಾಯಿಲೆಗಳಿಗೆ ಲಸಿಕೆ ನೀಡಲಾಗುತ್ತಿದ್ದು, ಮಕ್ಕಳಲ್ಲಿ ಕಾಣಿಸುವ ಅಪಾಯಕಾರಿ ಏಳು ರೋಗಗಳು ಏಳು ಬಣ್ಣಗಳನ್ನು ಪ್ರತಿನಿಧಿಸುವುದರಿಂದ ಕಾಮನಬಿಲ್ಲನ್ನು ಇಂದ್ರಧನುಷ್ ಚಿಹ್ನೆಯಾಗಿ ಇಡಲಾಗಿದೆ.
ಒಣ ಕೆಮ್ಮು, ದಡಾರ, ಪೋಲಿಯೋ, ಡಿಫ್ತೀರಿಯಾ, ಹೆಪಟೆಟಿಸ್ ಬಿ, ಧನುರ್ವಾಯು ಮತ್ತು ಕ್ಷಯ ರೋಗದಿಂದ ಮಕ್ಕಳನ್ನು ರಕ್ಷಿಸುವುದು ಅಭಿಯಾನದ ಉದ್ದೇಶವಾಗಿದೆ. ಕ್ಷಯ, ಡಿಫ್ತೀರಿಯಾ, ಪೆರ್ಟುಸಿಸ್, ಟೆಟನಸ್, ಪೋಲಿಯೋ, ನ್ಯುಮೋನಿಯಾ ಸೇರಿದಂತೆ ಇನ್ನಿತರ ಅಪಾಯಕಾರಿ ರೋಗಳ ವಿರುದ್ಧ ಲಸಿಕೆ ಕಾರ್ಯ ನಿರ್ವಹಿಸಲಿದೆ.
ಮೂರು ಸುತ್ತಿನಲ್ಲಿ ಕಾರ್ಯಕ್ರಮ
ಲಸಿಕೆ ವಂಚಿತರಿಗೆ ಮೂರು ಸುತ್ತಿನಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದ್ದು, ತಲಾ ಆರು ದಿನಗಳ ಕಾಲ ಲಸಿಕೆ ನೀಡಲಾಗುತ್ತದೆ. ಮೊದಲನೇ ಸುತ್ತು ಆಗಸ್ಟ್ 7ರಿಂದ 12 ವರೆಗೆ ನಡೆಯಲಿದೆ. ಎರಡನೇ ಸುತ್ತಿನಲ್ಲಿ ಸೆಪ್ಟೆಂಬರ್ 11ರಿಂದ 16ರ ವರೆಗೆ ಲಸಿಕೆ ಹಾಕಲಾಗುವುದು. ಮೂರನೇ ಸುತ್ತು ಅಕ್ಟೋಬರ್ 9ರಿಂದ 14 ರವರೆಗೆ ಲಸಿಕಾ ಅಭಿಯಾನ ನಡೆಸಲಾಗುವುದು.
ಲಸಿಕೆ ಕೊಡುವ ದಿನಗಳಲ್ಲಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಲಸಿಕೆ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಶಾ ಕಾರ್ಯಕರ್ತೆಯರು ಅಥವಾ ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿ ಲಸಿಕಾ ಅಭಿಯಾನದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಸಮೀಕ್ಷೆ ಆರಂಭವಾಗಲಿದೆ
ಮಿಷನ್ ಇಂದ್ರಧನುಷ್ ಯಶಸ್ವಿಗೊಳಿಸಲು ಜಿಲ್ಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮೊದಲ ಹಂತದಲ್ಲಿ ಮನೆ-ಮನೆ ಸಮೀಕ್ಷೆ ನಡೆಸಿ ಲಸಿಕೆ ಪಡೆಯದವರನ್ನು ಗುರುತಿಸಲಾಗುವುದು. ಯಾವುದೋ ಒಂದು ಕಾರಣಕ್ಕೆ ಲಸಿಕೆ ತೆಗೆದುಕೊಳ್ಳುವುದು ತಪ್ಪಿಹೋಗಿದ್ದರೆ, ಅಂಥವರನ್ನು ಗುರುತಿಸಿ ಲಸಿಕೆ ನೀಡಲಾಗುವುದು. ಕೋವಿಡ್ ಪ್ರಕರಣ ಕಡಿಮೆಯಾಗಿದ್ದು, ಜನರು ಆರೋಗ್ಯ ಕೇಂದ್ರಕ್ಕೆ ಭಯವಿಲ್ಲದೆ ಬಂದು ಲಸಿಕೆ ಪಡೆಯಬಹುದು. ಎಲ್ಲ ಸಮುದಾಯದವರು ಇದಕ್ಕೆ ಸಹಕಾರ ನೀಡಬೇಕು.
ಡಾ.ಪಿ.ಸಿ.ಕುಮಾರಸ್ವಾಮಿ
ಜಿಲ್ಲಾ ಆರೋಗ್ಯಾಧಿಕಾರಿ