ಮಿಶ್ರ ಬೇಸಾಯ ಪದ್ಧತಿಯಿಂದ ಅಭಿವೃದ್ಧಿ

29CBP3
Published on

ಚಿಕ್ಕಬಳ್ಳಾಪುರ : ರೈತರು ಮಿಶ್ರ ಬೇಸಾಯ ಪದ್ಧತಿ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದು ಬೆಂಗಳೂರಿನ ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ ಎಸ್.ರಾಜೇಂದ್ರ ಪ್ರಸಾದ್ ಸಲಹೆ ನೀಡಿದರು.

ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಹಾಗೂ ರೇಷ್ಮೆ, ಬಲಜಿಗಪಡೆ ಆಯೋಜಿಸಿದ್ದ ಸಿರಿಧಾನ್ಯಗಳ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿ, ಮಳೆ, ಬೆಳೆ, ನಿರ್ವಹಣೆ ವೆಚ್ಚದ ಸಮಸ್ಯೆಯ ನಡುವೆ ಆರ್ಥಿಕ ಸಂಕಷ್ಟದಿಂದ ಪಾರಾಗಲು ಮಿಶ್ರ ಬೇಸಾಯ ಸಹಕಾರಿ. ನಿರಂತರವಾಗಿ ಉತ್ಪಾದಕತೆ ಹೆಚ್ಚಾಗಿ ಒಳ್ಳೆಯ ಲಾಭ ತಂದು ಕೊಡುತ್ತದೆ ಎಂದರು.

ಕೃಷಿ ವಿಶ್ವವಿದ್ಯಾನಿಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ಡಾ.ರಾಮಾಂಜಿನಿ ಗೌಡ ಮಾತನಾಡಿ, ರೈತರು ಕೃಷಿಯಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು. ಜಂಟಿ ಕೃಷಿ ನಿರ್ದೇಶಕಿ ಎಲ್.ರೂಪಾ ಮಾತನಾಡಿ, ಜಿಲ್ಲೆಯಲ್ಲಿ ಈ ಸಾಲಿನಲ್ಲಿ ವಾಡಿಕೆ ಮಳೆಗಿಂತಲೂ ಹೆಚ್ಚು ಮಳೆಯಾಗಿದ್ದು, ಉತ್ತಮ ಫಸಲಿನ ನಿರೀಕ್ಷೆ ಇದೆ. ಈ ಭಾಗದಲ್ಲಿ ಸಿರಿಧಾನ್ಯಗಳ ಉತ್ಪಾದನೆಯೂ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸಂಸ್ಕರಣಾ ಘಟಕದ ಸ್ಥಾಪನೆಯ ಅಗತ್ಯವಿದೆ ಎಂದು ಹೇಳಿದರು.

ನೆಲಗಡಲೆ, ರಾಗಿ, ಸಿರಿಧಾನ್ಯಗಳು, ತೊಗರಿ, ಅಲಸಂದೆ, ಮುಸುಕಿನ ಜೋಳದ ಬೀಜೋತ್ಪಾದನೆ, ಸುಗಂಧ ಮತ್ತು ಔಷಧೀಯ ಸಸ್ಯಗಳ ಉದ್ಯಾನ, ಅವಳಿ ಮರಿಗಳ ಗುಣ ಹೊಂದಿರುವ ನಾರಿ ಸುವರ್ಣ ತಳಿಯ ಕುರಿಗಳು, ತಿಲೋಪಿಯಾ ಮೀನು ಸಾಕಾಣಿಕೆ, ಕೊಳವೆಬಾವಿ ಮರುಪೂರಣ ಪ್ರಾತ್ಯಕ್ಷಿಕೆ ಸೇರಿ ವಿವಿಧ ವಿಚಾರಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು. ಕೃಷಿ ವಿಶ್ವ ವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ಅರವಿಂದ್, ಸಂಶೋಧನಾ ನಿರ್ದೇಶಕ ವೈ.ಜಿ.ಷಡಕ್ಷರಿ, ಕ್ಷೇತ್ರ ಅಧೀಕ್ಷಕಿ ಎನ್.ಮಂಜುಳಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net