

ದೋರನಹಳ್ಳಿ: ರೈತರು ಮಿಶ್ರ ಬೆಳೆ ಮತ್ತು ಬೆಳೆಗಳ ಪರಿವರ್ತನೆ ಮಾಡುವುದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದು ಕೃಷಿ ವಿಸ್ತರಣಾ ಶಿಕ್ಷಣ ಮುಂದಾಳು ರವಿ ಪೂಜಾರಿ ಹೇಳಿದರು.
ಶಹಾಪುರ ತಾಲೂಕಿನ ಚಂದಾಪುರ ಗ್ರಾಮದಲ್ಲಿ ಬುಧವಾರ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ(ಎಇಇಸಿ) ಭೀಮರಾಯನಗುಡಿಯಿಂದ ರೈತರ ಹೊಲದಲ್ಲಿ ಟೊಮ್ಯಾಟೊ ಬೆಳೆಯ ಕ್ಷೇತ್ರೋತ್ಸವ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೇಸಿಗೆಯಲ್ಲಿ ಮಾಗಿ ಉಳುಮೆ ಮಾಡುವುದರಿಂದ ಬೆಳೆರೋಗ ಪೀಟೆಯ ಕೋಶ ನಾಶಪಡಿಸಬಹುದು. ಆದರೆ ಪೋಷಕಾಂಶ ನಿರ್ವಹಣೆ ಮತ್ತು ಬೆಳೆ ಪರಿವರ್ತನೆಯಿಂದ ಮಾತ್ರ ಇಳುವರಿ ಹೆಚ್ಚಿಸಲು ಸಾಧ್ಯ ಎಂದರು.
ಬೆಳೆ ಪರಿವರ್ತನೆಗೆ ಸಜಾತಿ ಬೆಳೆಗಳಿಗಿಂತಲೂ ವಿಜಾತಿಯ ಬೆಳೆಗಳನ್ನು ಬೆಳೆಯಬೇಕು. ಬೆಳೆಯಲ್ಲಿ ಬಾಧೆಗೆ ಒಳಗಾದ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ರೈತರು ಸಂಕರಣ ತಳಿಗಳನ್ನು ಉಪಯೋಗಿಸುತ್ತಿದ್ದರೆ ಇಂತಹ ತಳಿಗಳ ಗಿಡಕ್ಕೆ ಆಸರೆ ಕೋಲು ನೆಡಬೇಕು. ಗಿಡದಿಂದ ಗಿಡಕ್ಕೆ ಕನಿಷ್ಟ 60 ಸೆಂಮೀ ಸಾಲಿನಿಂದ ಸಾಲಿಗೆ ಸುಮಾರು 90 ಸೆಂಮೀ ಅಂತರ ಕಾಪಾಡಿಕೊಳ್ಳಬೇಕು. ಕೀಟಗಳ ಸಮೀಕ್ಷೆಗಾಗಿ ಪ್ರತಿ ಹೆಕ್ಟೇರಿಗೆ 5ರಂತೆ ಲಿಂಗಾಕರ್ಷಕ ಬಲೆ ನೆಡಬೇಕು. ಪ್ರೌಢ ಕೀಟಗಳು (ಕಾಯಿಕೊರಕ ಮತ್ತು ಸುರಳಿಪೂಚಿ) ರಾತ್ರಿ ಹೊತ್ತು ಬೆಳಕಿಗೆ ಆಕರ್ಷಣೆಯಾಗುವುದರಿಂದ ದೀಪದ ಬಲೆ ಬಳಸಿ ಆಕರ್ಷಿಸಿ ನಾಶಪಡಿಸಬೇಕು ಎಂದು ಸಲಹೆ ನೀಡಿದರು.
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಭೀಮರಾಯನಗುಡಿ ಬೇಸಾಯಶಾಸ್ತç ವಿಜ್ಞಾನಿ ಡಾ.ಅಬ್ದುಲ್‌ಗನಿ ನಬೂಜಿ ಟೊಮ್ಯಾಟೊ ಬೆಳೆ ಕುರಿತು ಮಾಹಿತಿ ನೀಡಿದರು. ತಿರುಪತಿ ನಾಯಕ, ಶಾಂತಿಲಾಲ್ ಚವ್ಹಾಣ್, ವಿಜಯ ರಾಠೋಡ್, ಚಂದು, ಕುಮಾರ, ವೆಂಕಟೇಶ ಇತರರಿದ್ದರು.