

ಹಾಸನ: ನಗರದ ಜಯನಗರ ಬಡಾವಣೆಯಲ್ಲಿ ಹಸಿರುಭೂಮಿ ಪ್ರತಿಷ್ಠಾನ, ಭಾರತ ಜ್ಞಾನ ವಿಜ್ಞಾನ ಸಮಿತಿ ಜಯನಗರ ಘಟಕ, ಮುಂಜಾನೆ ಮಿತ್ರರು ಹಾಗೂ ಸ್ಥಳೀಯ ನಾಗರಿಕರ ಸಹಭಾಗಿತ್ವದಲ್ಲಿ ಶನಿವಾರ ಮಿಯಾವಾಕಿ ಪುಟ್ಟಡವಿ ನಿರ್ಮಾಣ ಕಾರ್ಯ ಆರಂಭಗೊಂಡಿತು.
ಬೆಳಗ್ಗೆ 6 ಗಂಟೆಯಿಂದ ಗಿಡ ನೆಡುವ ಕಾರ್ಯ ಆರಂಭಗೊಂಡಿತು. ಸುಮಾರು 250ಕ್ಕೂ ಅಧಿಕ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಬಡಾವಣೆಯ ಪುಟಾಣಿಗಳಾದ ಮೋನಾಕ್ಷಿ, ರಂಜನ್, ಪಾಂಚಜನ್ಯ, ನೇಸರ ಹಾಗೂ ಶುಭಾ ಮೊದಲಿಗೆ ಗಿಡ ನೆಡುವ ಮೂಲಕ ಪುಟ್ಟಡವಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು. ಈ ಪ್ರಕ್ರಿಯೆಯಲ್ಲಿ ರಾಜೀವ್ ಎಂಜಿನಿಯರಿಂಗ್ ಕಾಲೇಜಿನ ಸುಮಾರು 30 ವಿದ್ಯಾರ್ಥಿಗಳು ಪಾಲ್ಗೊಂಡು ಗಿಡಳಗನ್ನು ನೆಟ್ಟರು.
ಪುಟ್ಟಡವಿ ನಿರ್ಮಾಣ ಸಂಚಾಲಕ ಹಾಗೂ ಮುಂಜಾನೆ ಮಿತ್ರರು ಅಧ್ಯಕ್ಷ ಸಿ.ಬಿ. ವೆಂಕಟೇಗೌಡ ಮಾತನಾಡಿ ಹಾಸನ ನಗರ ಕಳೆದ ತಿಂಗಳು ದಾಖಲೆಯ 41 ಡಿಗ್ರಿ ಉಷ್ಣತೆಯನ್ನು ದಾಖಲಿಸಿತು. ಇಡಿ ತಿಂಗಳು ಹಾಸನ ನಗರದ ಜನತೆ ಬಿಸಿಗಾಳಿಯಿಂದ ತತ್ತರಿಸಿದ್ದರು. ನಗರವನ್ನು ತಂಪಾಗಿಡಲು ಅಗತ್ಯವಾದ ಮರ-ಗಿಡಗಳು ನಗರದಲ್ಲಿ ಇಲ್ಲ. ಇದ್ದ ಮರಗಳನ್ನು ಅಭಿವೃದ್ಧಿ ಎಂಬ ಹೆಬ್ಬಾವಿಗೆ ಬಲಿಯಾಗಿವೆ. ಆ ಕಾರಣಕ್ಕೆ ಹಾಸನ ನಗರ ಬಿಸಿಲ ಬೇಗೆಯಿಂದ ತತ್ತರಿಸಿತು. ಹಾಸನ ನಗರದಲ್ಲಿ ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲ ಪುಟ್ಟಡವಿ ನಿರ್ಮಾಣ ಕಾರ್ಯ ಪ್ರಾರಂಭಿಸುವ ಆಂದೋಲನವನ್ನು ಹಸಿರು ಭೂಮಿ ಪ್ರತಿಷ್ಠಾನ, ಬಿಜಿವಿಎಸ್ ಹಾಗೂ ವಿವಿಧ ಸಂಘ-ಸಂಸ್ಥೆಗಳನ್ನು ಒಳಗೊಂಡು ಪ್ರಾರಂಭಿಸಿದೆ. ಈ ಸಂಬಂಧ ನಗರದ ಎಲ್ಲಾ ಕಾಲೇಜುಗಳು, ಸಂಘಟನೆಗಳು ಕನಿಷ್ಠ ಒಂದೊಂದು ಪುಟ್ಟ ಅಡವಿ ನಿರ್ಮಿಸುವ ಜವಾಬ್ದಾರಿ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳ ಮೂಲಕ ಸಭೆ ಕರೆದು ವಿನಂತಿಸಲಾಗಿದೆ. ಅದಲ ಭಾಗವಾಗಿ ಈ ತಿಂಗಳಲ್ಲಿ ಇದು ಮೂರನೇ ಪುಟ್ಟಡವಿ ನಿರ್ಮಾಣ ಆಂದೋಲನ ಎಂದು ಮಾಹಿತಿ ನೀಡಿದರು.
ಬಿಜಿವಿಎಸ್ ಜಿಲ್ಲಾಧ್ಯಕ್ಷ ಗುರುರಾಜು ಮಾತನಾಡಿ, ಮಾನವನ ಸುಸ್ಥಿರ ಬದುಕಿಗೆ ನಿಗದಿತ ವೇಳೆ ಹಾಗೂ ಸಮಯದಲ್ಲಿ ಮಳೆ, ಬೆಳೆ ಆಗಬೇಕು. ಆದರೆ ಹವಾಮಾನ ಬದಲಾವಣೆಯಿಂದ ಇಡೀ ಮಾನವನ ನಡಾವಳಿ ದಿಕ್ಕು ತಪ್ಪಿದೆ. ಅದಕ್ಕೆ ಮೂಲಕಾರಣ ಭೌಗೋಳಿಕ ಬಿಸಿ. ಈ ಬಿಸಿಯನ್ನು ತಹಬದಿಗೆ ತರಲು ಪರಿಸರ ಪೂರಕ ಅಭಿವೃದ್ಧಿಯೊಂದೇ ಮಾನದಂಡ ಹಾಗೂ ಅರಣ್ಯೀಕರಣದ ಅಭಿವೃದ್ಧಿಯಿಂದ ಮಾತ್ರ ಅದು ಸಾಧ್ಯ. ಇಂತಹ ಸುಸ್ಥಿರ ಪರಿಸರಕ್ಕೆ ಶೇಕಡ 33 ಕಾಡಿರಬೇಕು. ಈಗ ಇರುವುದು ಶೇಕಡ 18 ಮಾತ್ರ. ಪುಟ್ಟಡವಿ ನಿರ್ಮಾಣ ಕಾರ್ಯ ಈ ಅರಣ್ಯ ಏರಿಕೆಗೆ ಪುಟ್ಟದಾದ ಕೊಡುಗೆ ಕೊಡಲಿದೆ ಎಂದು ಹೇಳಿದರು.
ಹಸಿರುಭೂಮಿ ಪ್ರತಿಷ್ಠಾನದ ಹಸಿರು ಸಿರಿ ಸಂಚಾಲಕ ಪುರುಶೋತ್ತಮ ಮಾತನಾಡಿ, ನಗರದ ನಡುವೆ ನಿರ್ಮಾಣವಾಗುವ ಕಾಡು ನಗರವಾಸಿಗಳಿಗೆ ಶುದ್ಧಗಾಳಿ ನೀಡಿ ನೆಮ್ಮದಿಯ ಜೀವನ ಹಾಗೂ ಕೂಡಿ ಬಾಳುವ ಚಿಂತನೆ ಮೂಡಿಸುತ್ತದೆ. ಬಡಾವಣೆಯ ಜನತೆ ಸಮಿತಿ ರಚಿಸಿಕೊಂಡು ಈ ಪುಟ್ಟಡವಿಯನ್ನು ಕಾಪಾಡಿಕೊಂಡು ಹೋಗುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ನಿವಾಸಿ ನೇತ್ರಾ ಅವರು, ಹಸಿರುಭೂಮಿ ಪ್ರತಿಷ್ಠಾನ ಹಾಗೂ ಬಿಜಿವಿಎಸ್ ಗೆಳೆಯರು, ನಮ್ಮ ಬಡಾವಣೆಗೊಂದು ಚಂದದ ವನ ನಿರ್ಮಿಸಿಕೊಡುತ್ತಿದ್ದಾರೆ. ಈ ಬಡಾವಣೆಯ ಜನತೆ ಪ್ರತಿಯೊಂದು ಗಿಡವನ್ನು ಬಾಡದಂತೆ ಜೋಪಾನವಾಗಿ ಕಾಪಾಡುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷ ಡಾ.ಮಂಜುನಾಥ್, ಕಾರ್ಯದರ್ಶಿ ಅಹಮದ್ ಹಗರೆ, ಜಯನಗರ ಬಿಜಿವಿಎಸ್ ಘಟಕದ ಅಧ್ಯಕ್ಷೆ ಶಾರದಾ, ಕಾರ್ಯದರ್ಶಿ ಮೋನಿಕಾ, ಸಹಕಾರ್ಯದರ್ಶಿ ಆಶಾ, ಸದಸ್ಯ ಧರ್ಮಾನಂದ, ಗೀತಾ ಹಸಿರುಭೂಮಿ ಪ್ರತಿಷ್ಠಾನದ ಸದಸ್ಯರಾದ ಅಪ್ಪಾಜಿಗೌಡ, ಶಿವಶಂಕರಪ್ಪ, ಗಿರಿಜಾಂಬಿಕ, ಚಂದ್ರಶೇಖರ್, ಮಮತಾ ಪಾಟೀಲ್ ಹಾಗೂ ಸ್ಥಳೀಯ ಪುಟ್ಟಡವಿ ಕೇರ್ ಟೇಕರ್‌ಗಳಾದ ನೇತ್ರಾ, ಶಿವು, ಮಧುಕಾವ್ಯಾ, ಶುಭಾ, ಯೋಗೇಶ್, ರೇಖಾ ರಂಗಸ್ವಾಮಿ, ತಾರಾ ಪ್ರಸಾದ್, ಚೇತನ, ಶಿವಕುಮಾರ್, ಮಮತಾ, ಆದರ್ಶ, ಶಿಲ್ಪಾ, ಚಂದನಾ, ಮೀನಾ, ಕೇಶವಮೂರ್ತಿ, ಕವಿತಾ, ಹಾಗೂ ಮ್ಯಾಥ್ಸ್ ಅಕಾಡೆಮಿಯ ವೇದಾ ಮತ್ತು ಸ್ನೇಹಿತರು ಇದ್ದರು.