ಮಿನಿ ವಿಧಾನಸೌಧದಲ್ಲಿ ಎಂದಿನಂತಿದೆ ಜನಜಂಗುಳಿ

H16 Sub Registrar Office 1
Published on

ಹುಬ್ಬಳ್ಳಿ: ಜಗತ್ತಿನಾದ್ಯಂತ ಕರೊನಾ ಭೀತಿ ಉಂಟಾಗಿದ್ದರೆ ಇಲ್ಲಿನ ಮಿನಿ ವಿಧಾನಸೌಧದಲ್ಲಿ ಮಾತ್ರ ಯಾವುದೇ ಭೀತಿ ಇಲ್ಲದೇ ಎಂದಿನಂತೆ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಕಚೇರಿಗೆ ಆಗಮಿಸುತ್ತಿದ್ದಾರೆ.

ಕರೊನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶಾಲಾ- ಕಾಲೇಜುಗಳಿಗೆ ರಜೆ ಘೊಷಿಸಿದ್ದು, ನೂರಾರು ಜನ ಒಂದೆಡೆ ಸೇರದಂತೆ ಮನವಿ ಮಾಡಿದೆ. ಹೀಗಿದ್ದರೂ ಸದಾ ಗಿಜಿಗುಡುವ ಹುಬ್ಬಳ್ಳಿ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರವೂ ಎಂದಿನಂತೆ ಜನಜಂಗುಳಿ ವಾತಾವರಣ ಕಂಡುಬಂತು.

ಮಿನಿ ವಿಧಾನಸೌಧದಲ್ಲಿ ಹುಬ್ಬಳ್ಳಿ ಶಹರ ಮತ್ತು ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಕಚೇರಿ, ತಾಲೂಕು ಪಂಚಾಯಿತಿ ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ, ವಾರ್ತಾ ಇಲಾಖೆ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಸೇರಿ ವಿವಿಧ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಆರ್ಥಿಕ ವರ್ಷಾಂತ್ಯ ಆದ್ದರಿಂದ ಜನ ತಮ್ಮ ಕೆಲಸ ಕಾರ್ಯಗಳನ್ನು ಅವಧಿಯೊಳಗೆ ಮಾಡಿಕೊಳ್ಳಲೆಂದು ಕಚೇರಿಗೆ ಆಗಮಿಸುತ್ತಿದ್ದಾರೆ ಎನ್ನುತ್ತಾರೆ ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ.

ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಜನದಟ್ಟಣೆ: ನಿವೇಶನ, ಜಮೀನು ನೋಂದಣಿ, ಸಾಲ ಪ್ರಕ್ರಿಯೆ, ವಿವಾಹ ನೋಂದಣಿ ಮತ್ತಿತರ ಮಹತ್ವದ ದಾಖಲೆಗಳ ನೋಂದಣಿ ಕಾರ್ಯ ಹುಬ್ಬಳ್ಳಿಯ ಉತ್ತರ ಮತ್ತು ದಕ್ಷಿಣ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಯಥಾಸ್ಥಿತಿಯಲ್ಲಿ ನಡೆಯುತ್ತಿದೆ.

ವಿದ್ಯಾನಗರದ ಉತ್ತರ ವಿಭಾಗದ ಉಪ ನೋಂದಣಾಧಿಕಾರಿಯಲ್ಲಿ ಮಾರ್ಟ್​ಗೇಜ್ ಹಾಗೂ ಇತರ ಭೂ ದಾಖಲೆಗಳ ನೋಂದಣಿ ಕಾರ್ಯ ಎಂದಿನಂತೆ ನಡೆದಿದೆ. ಮಿನಿ ವಿಧಾನಸೌಧದಲ್ಲಿನ ದಕ್ಷಿಣ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸೋಮವಾರ ಜನದಟ್ಟಣೆ ಹೆಚ್ಚಾಗಿತ್ತು. ಕಚೇರಿ ತುಂಬ ಜನಜಂಗುಳಿ ಕಂಡುಬಂತು. ನಮ್ಮ ಕಚೇರಿಯಲ್ಲಿ ಎಂದಿನಂತೆ ನಿತ್ಯ 30ಕ್ಕೂ ಹೆಚ್ಚು ನೋಂದಣಿಯಾಗುತ್ತವೆ. ನಮ್ಮ ಕಚೇರಿಗೆ ಕರೊನಾದಿಂದ ಯಾವುದೇ ಅಡಚಣೆಯಾಗಿಲ್ಲ ಎಂದು ಹಿರಿಯ ಉಪ ನೋಂದಣಾಧಿಕಾರಿ ಡಿ.ಕೆ. ನಡವಲಮನಿ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net