

ಸರಗೂರು: ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಒಂಭತ್ತು ಕೋಟಿ ರೂ. ಬಿಡುಗಡೆಯಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ಜೆಎಸ್‌ಎಸ್ ಶಿವಾನುಭವ ಮಂಟಪದಲ್ಲಿ ಸರಗೂರು ತಾಲೂಕು ಸರ್ವತೋಮುಖ ಅಭಿವೃದ್ಧಿ ಹೋರಾಟ ಸಮಿತಿ ಶನಿವಾರ ಆಯೋಜಿಸಿದ್ದ ದುಂಡು ಮೇಜಿನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಡುಗಲು ಗ್ರಾಮದ ಸರ್ವೇ ನಂಬರ್ 3ರಲ್ಲಿರುವ 2 ಎಕರೆ 18 ಗುಂಟೆ ಜಾಗದಲ್ಲಿ ಮಿನಿ ವಿಧಾನಸೌಧ ನಿರ್ಮಾಣವಾಗಲಿದ್ದು, ಪ್ರಾರಂಭಿಕ ಹಂತದಲ್ಲಿ 9 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ ಹೇಳಿದರು.
ಬಿದರಹಳ್ಳಿ ಜಮೀನಿನಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣವಾಗಲಿದೆ, ಹಂಚಿಪುರದಲ್ಲಿ ಎರಡು ಎಕರೆ ಜಾಗದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣವಾಗಲಿದೆ. ತಾಲೂಕು ನ್ಯಾಯಾಲಯ ಮತ್ತು ನ್ಯಾಯಾಧೀಶರ ವಸತಿ ಕಟ್ಟಡ ನಿರ್ಮಾಣವಾಗಲಿದೆ ಎಂದು ಹೇಳಿದರು.
ಮಿನಿ ವಿಧಾನಸೌಧ ಕಟ್ಟಡ ಪ್ರಾರಂಭವಾಗಿ ಮುಗಿಯುವವರೆಗೆ ತೋಟಗಾರಿಕೆ, ಆಹಾರ ನೋಂದಣಾಧಿಕಾರಿಗಳ ಕಚೇರಿ, ಸರ್ವೇ ಇಲಾಖೆ ಹಾಗೂ ಇನ್ನಿತರ ಕಚೇರಿಗಳು ಎಚ್.ಡಿ.ಕೋಟೆಯಿಂದ ಸರಗೂರು ತಾಲೂಕಿಗೆ ಕೂಡಲೇ ಸ್ಥಳಾಂತರಗೊಳಿಸಬೇಕು ಎಂಬ ಕೂಗಿಗೆ ಉತ್ತರಿಸುತ್ತಾ, ಸರಗೂರು ಭಾಗದಲ್ಲಿ ಜಾಗದ ಅಭಾವವಿದೆ ಎಂದು ತಿಳಿಸಿದರು.
ಸರಗೂರು ತಾಲೂಕು ಸರ್ವತೋಮುಖ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಬಡಗಲಪುರ ನಾಗೇಂದ್ರ, ನುಗು ಜಲಾಶಯಕ್ಕೆ ಸಂಬಂಧಿಸಿದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಮತ್ತು ಇತರ ಸಿಬ್ಬಂದಿ ಕಚೇರಿಯನ್ನು ಹುಲ್ಲಳ್ಳಿಯಿಂದ ಜಲಾಶಯದ ಬಳಿಗೆ ಸ್ಥಳಾಂತರಿಸಬೇಕು, ಪ್ರವಾಸೋದ್ಯಮ ಅಭಿವೃದ್ಧಿಗಾಗಿ ನುಗು ಜಲಾಶಯ ಉದ್ಯಾನವನ ನಿರ್ಮಾಣ, ನುಗು ಸಫಾರಿ ಹಾಗೂ ನುಗು ಜಲಾಶಯದ ಹಿನ್ನೀರಿನಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಬೇಕು. ಸರಗೂರು ತಾಲೂಕಿನಲ್ಲಿ ಕೌಶಲ ಅಭಿವೃದ್ಧಿ ಕೈಗೊಳ್ಳಲು ಐಟಿಐ ಕಾಲೇಜು ನಿರ್ಮಾಣವಾಗಬೇಕು, ಕುರ್ಣೇಗಾಲ-ಕಾಡಬೇಗೂರು ಕಾಡಂಚಿನಿಂದ ಕೇರಳ ರಾಜ್ಯಕ್ಕೆ ನೂತನ ರಸ್ತೆ ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು, ಡಿ.ಎಂ.ನಂಜುಂಡಪ್ಪ ವರದಿಯಂತೆ ಸರಗೂರು ತಾಲೂಕು ಅತಿ ಹಿಂದುಳಿದಿದ್ದು ಆರ್ಥಿಕ ಪುನಶ್ಚೇತನ, ಉದ್ಯೋಗ ಸೃಷ್ಟಿ, ಕುಡಿಯುವ ನೀರು ಪೂರೈಕೆ, ಶಿಕ್ಷಣ, ಕೆರೆಗಳ ಸಂರಕ್ಷಣೆ, ಗ್ರಾಮಾಂತರ ರಸ್ತೆಗಳ ಅಭಿವೃದ್ಧಿ ಹಾಗೂ ಸರಗೂರು ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರ 2025-26ನೇ ಸಾಲಿನ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಹಕ್ಕೊತ್ತಾಯವನ್ನು ಮಂಡಿಸಿದರು.
ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವೆ: ಸಭೆಯ ಹಕ್ಕೊತ್ತಾಯಗಳ ಕುರಿತು ಮಾತನಾಡಿದ ತಹಸೀಲ್ದಾರ್ ಮೋಹನಕುಮಾರಿ, ಸರಗೂರು ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಹೇಳಿದರು. ಸರಗೂರು ವರ್ತಕರ ಸಂಘದ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆ ಪದಾಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಭೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಗ್ರಾಮೀಣ ಮಹೇಶ್, ಉಪಾಧ್ಯಕ್ಷ ಹಾಗೂ ಜಿಪಂ ಸದಸ್ಯ ಪಿ.ರವಿ, ಸರಗೂರು ಶಿವಣ್ಣ, ಬ್ರಹ್ಮದೇವ್, ಖಜಾಂಚಿ ಕಾಟ್ವಾಳು ನಟರಾಜು, ಸರಗೂರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ, ಉಪಾಧ್ಯಕ್ಷ ಶಿವಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯರಾದ ವಿನಯ್‌ಕುಮಾರ್, ಸರಗೂರು ಕೃಷ್ಣ, ಗ್ರಾಪಂ ಉಪಾಧ್ಯಕ್ಷ ಪ್ರಕಾಶ್, ಸದಸ್ಯರಾದ ಮಂಜೇಗೌಡ, ಗಂಗಾಧರ್, ನಂದನ್‌ಕುಮಾರ್, ತಾಪಂ ಮಾಜಿ ಅಧ್ಯಕ್ಷ ಸಿ.ಕೆ.ಗಿರೀಶ್, ಬಸವ ಬಳಗದ ಅಧ್ಯಕ್ಷ ಗಣಪತಿ, ಕಸಾಪ ತಾಲೂಕು ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಸಣ್ಣಸ್ವಾಮಿ, ವರ್ತಕರ ಸಂಘದ ಅಧ್ಯಕ್ಷ ಎಸ್.ಪಿ.ಪ್ರಸಾದ್, ಮಾಜಿ ಅಧ್ಯಕ್ಷ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.