ಮಿನಿ ಕೆರೆಯಂತಾದ ಮುಖ್ಯ ರಸ್ತೆ

ydg05
Published on

ಕೆಂಭಾವಿ: ಪಟ್ಟಣದ ಅಂಬಿಗರ ಚೌಡಯ್ಯ ವೃತ್ತದಿಂದ ಟಿಪ್ಪು ಸುಲ್ತಾನ್ ವೃತ್ತದ (ಮಲಘಾಣ ಚೌಕ್) ವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟು ಕೆರೆಯಂತಾಗಿದೆ.

ಪೊಲೀಸ್ ಠಾಣೆ, ಸಮುದಾಯ ಆರೋಗ್ಯ ಕೇಂದ್ರ, ಮುಖ್ಯ ಬಜಾರ, ಶಾಲಾ ಕಾಲೇಜು ಸೇರಿ ಪಟ್ಟಣದ ಪ್ರಮುಖ ಸರ್ಕಾರಿ ಕಚೇರಿಗಳಿಗೆ ಸಂಪರ್ಕ ಕೊಂಡಿಯಾಗಿರುವ ಈ ರಸ್ತೆ ನಡೆದಾಡಲು ಬಾರದಂತ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಐದು ವರ್ಷದ ಹಿಂದೆ ಮಾಡಿದ ಸಿಸಿ ರಸ್ತೆ ಸಂಪೂರ್ಣ ಹಾಳಾಗಿ ಈಗ ಮಳೆ ನೀರು ರಸ್ತೆಯಲ್ಲಿ ಮಿನಿ ಕೆರೆಯಂತೆ ತುಂಬಿಕೊAಡಿದೆ.

ಹಲವು ಬಾರಿ ಈ ರಸ್ತೆ ದುರಸ್ತಿಗೊಳಿಸುವಂತೆ ಸಾರ್ವಜನಿಕರು ಮನವಿ ಮಾಡಿದರೂ ಕ್ಯಾರೆ ಎನ್ನದ ಅಧಿಕಾರಿಗಳು ಬಂದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಈಗ ಅವರ ಹೆಗಲೇರಿದೆ ಎಂಬುದು ಈಗ ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಮಂಗಳವಾರ ಮತ್ತು ಬುಧವಾರ ಸತತವಾಗಿ ಸುರಿದ ಮಳೆಯಿಂದ ರಸ್ತೆ ಸಂಪೂರ್ಣ ಕೆರೆಯಂತಾಗಿದ್ದು, ವಾಹನ ಸವಾರರು, ಅನಿವಾರ್ಯವಾಗಿ ಇದೇ ರಸ್ತೆಯಲ್ಲೆ ಸಂಚರಿಸುವ ಸ್ಥಿತಿ ಬಂದೊದಗಿದೆ.

ಕೋಟಿಗಟ್ಟಲೆ ಅನುದಾನ ಪುರಸಭೆಗೆ ಬರುತ್ತಿದ್ದು ಸಾರ್ವಜನಿಕರಿಗೆ ಉಪಯೋಗವಾಗುವಂತ ಕೆಲಸ ಅಧಿಕಾರಿಗಳು ಏಕೆ ಮಾಡುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರಿಗೆ ಕಾಡುತ್ತಿದೆ. ಈ ಹದಗೆಟ್ಟ ರಸ್ತೆ ಮೇಲೆ ಬುಧವಾರ ಹಲವು ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ಧ ಘಟನೆ ಕೂಡ ನಡೆದಿವೆ. ಆದರೆ ದೊಡ್ಡ ಅನಾಹುತವಾಗುವ ಮೊದಲು ಪುರಸಭೆ ಅಧಿಕಾರಿಗಳು ಎಚ್ಚೆತ್ತು ಕೂಡಲೇ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂಬುದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net