

ಮೈಸೂರು: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ಯುವಕನ 2 ಕಿಡ್ನಿ, ಒಂದು ಲಿವರ್, ಹೃದಯ ಕವಾಟಗಳು ಹಾಗೂ ಕಾರ್ನಿಯಾಗಳನ್ನು ಕುಟುಂಬದವರು ದುಃಖದ ನಡುವೆಯೂ ದಾನ ಮಾಡಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಹಲಗೂರಿನ ಎ.ಎನ್.ಅಭಿಷೇಕ್(29) ಅಂಗಾಂಗ ದಾನ ಮಾಡುವ ಮೂಲಕ ಇತರರ ಬಾಳಿಗೆ ಬೆಳಕಾಗಿದ್ದಾರೆ. ತೊರೆಕಾಡನಳ್ಳಿ ಬಳಿ ಬೆಂಗಳೂರು ನೀರು ಸರಬರಾಜು ಮಂಡಳಿ(ಬಿಡಬ್ಲುೃಎಸ್‌ಎಸ್‌ಬಿ) ಕೇಂದ್ರದ ಮುಖ್ಯ ದ್ವಾರದ ಬಳಿ ಆ.18ರಂದು ಮಣ್ಣಿನ ರಾಶಿಯನ್ನು ನೋಡದೆ ಬೈಕ್‌ನಲ್ಲಿ ನುಗ್ಗಿದ ಪರಿಣಾಮ ಅಪಘಾತವಾಗಿತ್ತು. ಆಸ್ಪತ್ರೆಗೆ ದಾಖಲಿಸಿದಾಗ ಮಿದುಳಿನ ಅಂಗಾಂಶಕ್ಕೆ ಘಾಸಿಯಾಗಿರುವುದು ಸಿಟಿ ಸ್ಕಾೃನ್‌ನಿಂದ ಕಂಡುಬಂತು. ನಾಲ್ಕು ದಿನಗಳ ಕಾಲ ಚಿಕಿತ್ಸೆ ನೀಡಲಾಯಿತಾದರೂ ಮಿದುಳಿನ ಅಂಗಾಂಶ ವೈಫಲ್ಯ ಉಂಟಾಯಿತು. ವೈದ್ಯರು ಮಿದುಳು ನಿಷ್ಕ್ರಿಯ (ಬ್ರೈನ್ ಡೆಡ್) ಎಂದು ಆ.22ರಂದು ಘೋಷಿಸಿದ ಬಳಿಕ ಅಂಗಾಂಗ ದಾನ ಮಾಡಲಾಯಿತು ಎಂದು ಮೈಸೂರು ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷ ಎನ್.ಜಿ.ಭರತೀಶ ರೆಡ್ಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.