

ಮೈಸೂರು: ‘ಮಿಡ್ ಬ್ರೈನ್ ಆಕ್ಟಿವೇಷನ್’ ಎಂಬುದು ಒಂದು ಮೋಸದ ಕಲೆಯಾಗಿದ್ದು, ಇದು ಸತ್ಯವೆಂದು ನಿರೂಪಿಸಿದರೆ 5 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಅಖಿಲ ಭಾರತ ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ ಸವಾಲು ಹಾಕಿದರು.
ಪಾಲಕರು ತಮ್ಮ ಮಕ್ಕಳ ಮಿದುಳು ಹೆಚ್ಚು ಕ್ರಿಯಾಶೀಲವಾಗಲಿ ಎನ್ನುವ ದೃಷ್ಟಿಯಿಂದ ಇಂಥ ಶಿಬಿರಗಳಿಗೆ ಸಾವಿರಾರು ರೂ. ನೀಡಿ ಸೇರಿಸುತ್ತಾರೆ. ಆದರೆ, ಇದರಲ್ಲಿ ಯಾವುದೇ ರಹಸ್ಯ ಅಡಗಿಲ್ಲ. ಈ ಬಗ್ಗೆ ಪಾಲಕರು ಎಚ್ಚರ ವಹಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಿಡ್ ಬ್ರೈನ್ ಆಕ್ಟಿವೇಷನ್ ಮಾಡುವವರು, ಮಾಡಿಕೊಂಡವರು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ನಾನು ಒಡ್ಡಿದ ಪ್ರಶ್ನೆಗಳಿಗೆ ಉತ್ತರಿಸಿ ಕಲೆಯನ್ನು ಸತ್ಯವೆಂದು ನಿರೂಪಿಸಬೇಕು. ಅಂಥವರಿಗೆ 5 ಲಕ್ಷ ರೂ. ನೀಡಲಾಗುವುದು ಎಂದು ಸವಾಲು ಹಾಕಿದರು.
ಈಗಾಗಲೇ ಈ ಮೋಸದ ಕಲೆಯ ಬಗ್ಗೆ ಸ್ಥಳೀಯ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಾತ್ಯಕ್ಷಿಕೆ ಮೂಲಕ ಜನರಿಗೆ ತಿಳಿಸಲಾಗಿದೆ. ಶಿಬಿರಗಳನ್ನು ನಡೆಸುವ ಕೆಲ ಸಂಸ್ಥೆಗಳು ಮಿಡ್ ಬ್ರೈನ್ ಆಕ್ಟಿವೇಷನ್ ಮಾಡಿದ್ದೇವೆ ಎಂದು ಹೇಳಿ ಮಕ್ಕಳ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿ, ಅವರ ಮುಂದೆ ತೋರಿಸುವ ವಸ್ತು, ಬಣ್ಣಗಳನ್ನು ಹೇಳಬಲ್ಲರು ಎಂದು ನಂಬಿಸುತ್ತಿದ್ದಾರೆ. ಅಕ್ಷಿಪಟಲ(ರೆಟಿನಾ)ದ ಮೇಲೆ ಬೆಳಕು ಬೀಳದೆ ಯಾವುದೇ ವಸ್ತುವನ್ನು ಕಾಣಲು ಸಾಧ್ಯವಿಲ್ಲವೆಂಬುದು ಕಟುಸತ್ಯ. ಆದರೆ, ಹಲವಾರು ವ್ಯಕ್ತಿ ಮತ್ತು ಸಂಸ್ಥೆಗಳು ಈ ತರಹದ ಸಾಮರ್ಥ್ಯವನ್ನು ವಿಶೇಷವಾಗಿ ತರಬೇತಿ ಮೂಲಕ ಮಕ್ಕಳಲ್ಲಿ ಮೂಡಿಸುತ್ತೇವೆಂಬ ಸುಳ್ಳು ಹೇಳಿ ಅಮಾಯಕ ಮಕ್ಕಳ ಹಾಗೂ ಹೆತ್ತವರನ್ನು ಮೋಸಗೊಳಿಸುತ್ತಿದ್ದಾರೆ ಎಂದು ಹೇಳಿದರು.
ಮೈಸೂರಿನಲ್ಲಿ ಈ ಕಲೆ ಕುರಿತು ಶಾಲೆ-ಕಾಲೇಜುಗಳಲ್ಲಿ ಶಿಬಿರದ ಮೂಲಕ ತಿಳಿಸಿಕೊಡಲಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಈ ಕಲೆಯನ್ನು ತನಿಖೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದರು.
ಲೇಖಕ ಪಂಡಿತಾರಾಧ್ಯ, ಕರಾವಿಪ ಕೊಡಗು ಜಿಲ್ಲಾಧ್ಯಕ್ಷ ಟಿ.ಜಿ.ಪ್ರೇಮ್‌ಕುಮಾರ್, ಪಾಂಡವಪುರ ತಾಲೂಕು ಅಧ್ಯಕ್ಷ ಚಂದ್ರಶೇಖರಯ್ಯ, ಮೈಸೂರು ಸೈನ್ಸ್ ಫೌಂಡೇಷನ್ ಕಾರ್ಯದರ್ಶಿ ಎನ್.ಮಹದೇವಪ್ಪ ಇದ್ದರು.