ಮಿಡತೆ ಗ್ಯಾಂಗ್​ವಾರ್​ಗೆ ಅನ್ನದಾತ ತಲ್ಲಣ

MIDATE 1
Published on

ಜಯತೀರ್ಥ ಪಾಟೀಲ ಕಲಬುರಗಿ: ಕರೊನಾ ವೈರಸ್ನಿಂದ ತತ್ತರಿಸಿದ್ದ ಕಲ್ಯಾಣ ನಾಡಿನ ಮಂದಿ ದಿನಗಳೆದಂತೆ ಅದರೊಂದಿಗೆ ಹೊಂದಿಕೊಂಡು ಬಿಟ್ಟಿದ್ದಾರೆ. ಕೋವಿಡ್ ಬೆನ್ನಲ್ಲೇ ದಾಳಿಗೆ ಸನ್ನದ್ಧವಾಗಿದೆ ಮರುಭೂಮಿ ಮಿಡತೆ. ವಿಶೇಷವಾಗಿ ರೈತನ ಅನ್ನಕ್ಕೇ ಕನ್ನ ಹಾಕುವ ಈ ವಲಸೆ ಮಿಡತೆ ಇದೀಗ ದೇಶಾದ್ಯಂತ ಸುದ್ದಿ ಮಾಡುತ್ತಿದೆ.
ಮಿಡತೆ ಹಾವಳಿಯಿಂದ ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ ತತ್ತರಿಸಿದ್ದು, ಮಹಾರಾಷ್ಟ್ರದ ಕೆಲವೆಡೆಯೂ ಲಗ್ಗೆ ಇಡುತ್ತಿವೆ. ಈ ಮಿಡತೆಗಳು ಗುಂಪುಗೂಡಿ ಅಲೆಗಳೆಂತೆ ದಿನಕ್ಕೆ 150 ಕಿ.ಮೀ. ದೂರ ಗಾಳಿ ಬೀಸೋ ದಿಕ್ಕಿನಲ್ಲಿ ಹಾರಬಲ್ಲವು. ಈ ಮಿಡತೆಗಳ ಸೈನ್ಯ (ಸುಮಾರು 40 ಮಿಲಿಯನ್) ದಿನಕ್ಕೆ 35,000 ಸಾವಿರ ಜನರು ತಿನ್ನುವಷ್ಟು ಅಹಾರ ತಿಂದುಬಿಡವಲ್ಲವು.
ಬೆಳೆ, ಅರಣ್ಯ ಹಾನಿ: ಮಿಡತೆ ಹಾವಳಿಗೆ ಕೃಷಿ, ತೋಟಗಾರಿಕೆ ಬೆಳೆ ಮತ್ತು ಅರಣ್ಯೀಕರಣದ ಗಿಡ, ಮರಗಳಿಗೆ ಕುತ್ತು ಎದುರಾಗಲಿದೆ. ಕೃಷಿಗೆ ಸಂಬಂಧಿಸಿದಂತೆ ಕಬ್ಬು ಹೊರತುಪಡಿಸಿ ಇನ್ನಾವುದೇ ಬೆಳೆ ಸದ್ಯಕ್ಕಿಲ್ಲ. ಆದರೆ ಹಣ್ಣು, ಹೂ ಸೇರಿ ತೋಟಗಾರಿಕೆ ಬೆಳೆ ಹೆಚ್ಚಿನ ಪ್ರಮಾಣದಲ್ಲಿದೆ. ಸುಮಾರು 1380 ಹೆಕ್ಟೇರ್ ತರಕಾರಿ, 841 ಹೆಕ್ಟೇರ್ನಲ್ಲಿ ನಾನಾ ತೆರನಾದ ಹಣ್ಣು ಸೇರಿ 2100 ಹೆಕ್ಟೇರ್ ಪ್ರದೇಶದ ರೈತರಲ್ಲಿ ಆತಂಕ ಮೂಡಿದೆ.
ಗಿಡ, ಮರ ಭಕ್ಷಕ: ಈ ಮಿಡತೆಗಳು ಬಹುಭಕ್ಷಕವಾಗಿದ್ದು, ಯಾವುದೇ ಗಿಡ ಅಥವಾ ಬೆಳೆಯ ಎಲೆ, ಹೂ, ಹಣ್ಣು, ಬೀಜ, ಮರದ ತೊಗಟೆ ಹಾಗೂ ಬೆಳೆಯ ಕುಡಿಗಳನ್ನು ನೋಡನೋಡುತ್ತಿದ್ದಂತೆ ಭಕ್ಷಿಸುತ್ತವೆ. ಹೆಣ್ಣು ಮಿಡತೆಯು ತೇವಾಂಶ ಹೊಂದಿರುವ ಮರಳು ಮಿಶ್ರಿತ ಮಣ್ಣಿನಲ್ಲಿ ತನ್ನ ಜೀವಾವಧಿಯಲ್ಲಿ ವಾರಕ್ಕೊಮ್ಮೆ 1000 ತತ್ತಿಗಳನ್ನು ಪ್ರತಿ ಚದರಡಿಗೆ ಇಡುತ್ತಿದ್ದು, ಮೂರು ಬಾರಿ ಈ ಆವೃತ್ತಿ ಇರಲಿದೆ. ಚಕ್ರವಾಗಿ ಹಾರುತ್ತ ಹೊಲದಲ್ಲಿನ ಬೆಳೆ ತಿಂದು, ಅಲ್ಲೇ ಸಂತಾನೋತ್ಪತ್ತಿ ಮಾಡಿ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತವೆ.
ಮೂಲಗಳ ಪ್ರಕಾರ, ಈಗಾಗಲೇ ನೆರೆ ರಾಜ್ಯ ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಮಿಡತೆಗಳು ಕಂಡುಬಂದಿದ್ದು, ಯಾವುದೇ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಗೂ ದಾಂಗುಡಿ ಇಡುವ ಸಾಧ್ಯತೆ ಇದೆ.
ಕೀಟಗಳ ನಿರ್ವಹಣೆ: ಮಿಡತೆಗಳು ತತ್ತಿಗಳಿರಿಸಿದ ಜಾಗ ಗುರುತಿಸಿ ಅವುಗಳ ಸುತ್ತ ಕಂದಕ ನಿಮರ್ಿಸಿ ತತ್ತಿಯಿಂದ ಬರುವ ಮರಿಗಳನ್ನು ಆ ಕಂದಕಗಳಲ್ಲಿ ಬಿಡುವಂತೆ ಮಾಡುತ್ತವೆ. ತತ್ತಿಗಳನ್ನು ನಾಶಪಡಿಸಲು ಮೇಲಿಂದ ಮೇಲೆ ಉಳುಮೆ ಮಾಡುವುದು. ಮಿಡತೆ ಕಾಣಿಸಿಕೊಂಡಾಗ ತಗಡಿನ ಡಬ್ಬಿ, ಡ್ರಮ್ಮು, ತಟ್ಟೆ ಬಾರಿಸುವ ಮೂಲಕ ಭಾರಿ ಶಬ್ದ ಕೇಳುವಂತೆ ಮಾಡಬೇಕು. ರೇಡಿಯೋ ಅಥವಾ ಇಲೆಕ್ಟ್ರಾನಿಕ್ ಸೌಂಡ್ನಿಂದ ಮಿಡತೆಗಳು ಭೂಮಿಯಲ್ಲಿ ಬೆಳೆಗಳ ಮೇಲೆ ದಾಳಿ ಮಾಡುವುದಿಲ್ಲ.

ಜಿಲ್ಲಾಧಿಕಾರಿ ಸಭೆ ಇಂದು
ಮಿಡತೆ ಹಾವಳಿಗೆ ಸಂಬಂಧಿಸಿದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಬಿ.ಶರತ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಹತ್ವದ ಸಭೆ ಕರೆಯಲಾಗಿದೆ. ಕೃಷಿ, ತೋಟಗಾರಿಕೆ, ಅರಣ್ಯ ಸೇರಿ ನಾನಾ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಮಿಡತೆ ಗ್ಯಾಂಗ್ ಜಿಲ್ಲೆಗೆ ಪ್ರವೇಶಿಸುವ ಮುನ್ನ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ ಕುರಿತು ಸಮಗ್ರ ಚರ್ಚೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net