

ಚಿತ್ರದುರ್ಗ: ಬುಡಕಟ್ಟು ಸಂಸ್ಕೃತಿಯ ನಾಯಕ, ವೀರ ಸಾಹಸಿ, ತಾಲೂಕಿನ ಬಚ್ಚಬೋರನಹಟ್ಟಿ ಗ್ರಾಮದ ಆರಾಧ್ಯ ದೈವ ಗಾದ್ರಿಪಾಲನಾಯಕ ಸ್ವಾಮಿಯ ಮಿಂಚೇರಿ ಯಾತ್ರೆ ಬುಧವಾರ ಕೋಟೆನಗರಿ ಪ್ರವೇಶಿಸಿದ ವೇಳೆ ಅದ್ದೂರಿ ಸ್ವಾಗತ ದೊರೆಯಿತು.
23ರಂದು ಮಿಂಚೇರಿಗೆ ಹೊರಟು ಯಶಸ್ವಿಯಾಗಿ ಜಾತ್ರೆಯನ್ನು ಮುಗಿಸಿ ಸಾಲು-ಸಾಲಾಗಿ ಹಿಂದಿರುಗಿದ ನೂರಾರು ಎತ್ತಿನ ಗಾಡಿಗಳು ನಗರದೊಳಗೂ ಭರ್ಜರಿ ಸದ್ದು ಮಾಡಿದವು. ಅಲಂಕೃತ ಬಂಡಿಗಳು ಕಣ್ಮನ ಸೆಳೆದವು.
ರಾಷ್ಟ್ರೀಯ ಹೆದ್ದಾರಿ 4ರ ಹೋಟೆಲ್ ಬಿಗ್‌ಬಾಸ್ ಸಮೀಪ ಯಾತ್ರಾ ಮಹೋತ್ಸವವನ್ನು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ನಾಯಕ ಸಮುದಾಯದ ತಾಲೂಕು ಅಧ್ಯಕ್ಷ ಬಿ.ಕಾಂತರಾಜ್ ಸಂಭ್ರಮದಿಂದ ಬರ ಮಾಡಿಕೊಂಡರು. ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.
ಅಲ್ಲಿಂದ ಆರಂಭವಾದ ಮೆರವಣಿಗೆ ರೈಲ್ವೆ ನಿಲ್ದಾಣದ ರಸ್ತೆ, ಆಜಾದ್ ಫ್ಲೋರ್‌ಮಿಲ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಮಹಾತ್ಮಗಾಂಧಿ, ಎಸ್‌ಬಿಐ, ಅಂಬೇಡ್ಕರ್, ಮೆಜೆಸ್ಟಿಕ್ ವೃತ್ತವಾಗಿ ಸಂಚರಿಸಿತು. ಸಮೀಪದ ರಾಜವೀರ ಮದಕರಿನಾಯಕರ ಪ್ರತಿಮೆಗೆ ಮಾಲಾರ್ಪಣೆಯೊಂದಿಗೆ ಮುಖಂಡರು ಗೌರವ ಸಲ್ಲಿಸಿದರು. ನಂತರ ಕೆಳಗೋಟೆಯ ಚನ್ನಕೇಶವ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದ ಬಚ್ಚಬೋರನಹಟ್ಟಿ ಗ್ರಾಮದತ್ತ ಪಯಣ ಮುಂದುವರೆಯಿತು.
ಉರುಮೆ, ತಮಟೆ, ಸೋಬಾನೆ, ಖಾಸಬೇಡರ ಪಡೆ, ಗೊಂಬೆ ಕುಣಿತ, ಕೋಲಾಟ ಸೇರಿ ವಿವಿಧ ಜನಪದ ಕಲಾತಂಡಗಳು ಮೆರವಣಿಗೆಗೆ ವಿಶೇಷ ಮೆರಗು ನೀಡಿದವು.
ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಕಿಕ್ಕಿರಿದು ಸೇರಿದ್ದ ಸಾವಿರಾರು ಭಕ್ತರು ಮೈಮರೆತು ಕುಣಿದು ಸಂಭ್ರಮಿಸಿದರು. ಇಕ್ಕೆಲಗಳಲ್ಲಿ ನಿಂತಿದ್ದ ಜನ ಮಿಂಚೇರಿ ಯಾತ್ರೆಯ ಬುಡಕಟ್ಟು ವೈಭವ ಕಣ್ತುಂಬಿಕೊಂಡರು. ಇದೇ ವೇಳೆ ಮಜ್ಜಿಗೆ, ತಂಪು ಪಾನೀಯ, ಕುಡಿಯುವ ನೀರು, ಪ್ರಸಾದ ವಿತರಿಸಲಾಯಿತು.
ಡಿ. 28ರಂದು ಬಚ್ಚಬೋರನಹಟ್ಟಿ ಕಕ್ಕಲಬೆಂಚುವಿನಲ್ಲಿ ವಿಶೇಷ ಪೂಜೆ ಸಲ್ಲಿಸಿ, ಗ್ರಾಮದ ಸಮೀಪದಲ್ಲಿನ ದೇವರ ಬಂಡೆ ಹಾಗೂ ಬಸವಣ್ಣನ ಬಾವಿ ಬಳಿ ಗಂಗಾ ಪೂಜೆ ನೆರವೇರಲಿದೆ. ನಂತರ ಗಾದ್ರಿಪಾಲನಾಯಕ ಸ್ವಾಮಿ ಗುಡಿದುಂಬಿಸುವ ಕಾರ್ಯಕ್ರಮ ನಡೆಯಲಿದೆ.
ಉತ್ಸವಗಳ ಅಗತ್ಯವಿದೆ: ಟಿ.ರಘುಮೂರ್ತಿ ಮಾತನಾಡಿ, ಗೋ ಸಂರಕ್ಷಕ, ಹುಲಿಯೊಂದಿಗೆ ಕಾದಾಡಿದ ವೀರ ಗಾದ್ರಿಪಾಲನಾಯಕ ಸ್ವಾಮಿ ಬುಡಕಟ್ಟು ಸಮುದಾಯದ ಆರಾಧ್ಯ ದೈವ. ಮಿಂಚೇರಿ ನಮ್ಮ ಪುಣ್ಯಕ್ಷೇತ್ರ, ಧಾರ್ಮಿಕ ಕೇಂದ್ರವೂ ಹೌದು. ಯುವಸಮೂಹ ಸಂಸ್ಕಾರ-ಸಂಸ್ಕೃತಿ ಮರೆಯುತ್ತಿರುವ ಪ್ರಸ್ತುತ ದಿನಗಳಲ್ಲಿ ಇಂತಹ ಉತ್ಸವಗಳ ಅಗತ್ಯವಿದೆ. ಸಮಾಜದ ಒಳಿತಿಗಾಗಿಯೂ ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು.
ಬಿ.ಕಾಂತರಾಜ್ ಮಾತನಾಡಿ, ಆರು ದಿನದ ಈ ಜಾತ್ರೆಯಲ್ಲಿ ನಿತ್ಯವೂ ವಿಶೇಷ ಆಚರಣೆಗಳು ನಡೆದವು. ಬುಡಕಟ್ಟು ಸಂಸ್ಕೃತಿ ಉಳಿಯಲು ಇಂತಹ ಉತ್ಸವ ಸರ್ವ ಕಾಲಕ್ಕೂ ಮುಂದುವರೆಯಬೇಕು ಎಂದರು.
ಸಮುದಾಯದ ಮುಖಂಡರಾದ ಎಸ್.ಸಂದೀಪ್, ಯೋಗೇಶ್ ಬಾಬು, ಅಂಜಿನಪ್ಪ, ಸೂರಯ್ಯ, ಉದ್ಯಮಿ ಅರುಣ್‌ಕುಮಾರ್, ಕೃಷ್ಣಮೂರ್ತಿ, ಸೂರನಾಯಕ, ಗೋಪಾಲಸ್ವಾಮಿ ನಾಯಕ, ಕಾಟೀಹಳ್ಳಿ ಕರಿಯಪ್ಪ, ಸಾಗರ್, ವಿಜಯ್‌ಕುಮಾರ್, ದರ್ಶನ್ ಇಂಗಳದಾಳ್, ಬಸವರಾಜ್ ಇತರರಿದ್ದರು.