

ಚಿಂತಾಮಣಿ : ತಾಲೂಕು ಪಂಚಾಯಿತಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸರಿಯಾಗಿ ಮಾಹಿತಿ ನೀಡದ ಅಧಿಕಾರಿಗಳನ್ನು ಸಚಿವ ಡಾ.ಕೆ.ಸುಧಾಕರ್ ತರಾಟೆಗೆ ತೆಗೆದುಕೊಂಡರು. ಸಭೆಗೆ ಏನು ಶೋಕಿಗೆ ಬರ್ತೀರಾ? ಎಂದು ಖಾರವಾಗಿ ಪ್ರಶ್ನಿಸಿದರು.
ತಾಲೂಕಿನಲ್ಲಿ ಎಷ್ಟು ಹೆರಿಗೆಗಳು ಆಗಿವೆ ಎಂಬ ಪ್ರಶ್ನೆಗೆ ನಿಖರ ಉತ್ತರ ನೀಡದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯೋಗೇಶ್‌ಗೌಡ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಇದು ನನ್ನ ಮೊದಲ ಸಭೆ, ಇನ್ಮೊಂದು ಸಭೆಯಲ್ಲಿ ಸಂಫೂರ್ಣ ಮಾಹಿತಿ ಇರಬೇಕು, ನಾನು ಸಭೆಗೆ ಬರೋದು ಮಾಹಿತಿಗೆ, ಹಾಜರಾತಿಗಲ್ಲ ಎಂದು ಸಿಡಿಮಿಡಿಗೊಂಡರು.
ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಿಗಿಂತ ಚೆನ್ನಾಗಿರಬೇಕು, ಸರ್ಕಾರಿ ಆಸ್ಪತ್ರೆಗೆ ಬರುವವರೆಲ್ಲರೂ ಬಡವರಾಗಿದ್ದು, ಇಲ್ಲಿ ಅದು ಇಲ್ಲ, ಇದು ಇಲ್ಲ ಎಂದು ಅವರನ್ನು ಬೇರೆ ಕಡೆ ಕಳುಹಿಸದಂತೆ ತಾಲೂಕು ಆರೋಗ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.ತಾಲೂಕಿನಲ್ಲಿರುವ ಆಸ್ಪತ್ರೆಗಳು, ವೈದ್ಯರು ಮತ್ತು ಸಿಬ್ಬಂದಿಯ ಮಾಹಿತಿ ಪಡೆದ ಸಚಿವರು ಸಾರ್ವಜನಿಕ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಮತ್ತು ಇತರ ಸಮಸ್ಯೆಗಳ ಕುರಿತು ಚರ್ಚಿಸಿದರು, ಸಮಸ್ಯೆ ಗಮನಹರಿಸುವಂತೆ ಜಿಪಂ ಸಿಇಒ ೌಜೀಯಾ ತರನ್ನುಮ್ ಅವರಿಗೆ ಸೂಚಿಸಿದರು.
ರೈತರ ಜಮೀನಿನ ಸರ್ವೇ 516 ಅರ್ಜಿಗಳು 2014ರಿಂದಲೂ ವಿಲೇವಾರಿಯಾಗದೆ ಬಾಕಿ ಉಳಿದಿವೆ, ಇವುಗಳನ್ನು ಪೂರ್ಣಗೊಳಿಸುವುದು ಯಾವಾಗ? ಎಂದು ಪ್ರಶ್ನಿಸಿದ ಸಚಿವರು, ಶೀಘ್ರವೇ ವಿಲೇವಾರಿ ಮಾಡುವಂತೆ ಸರ್ವೇ ಅಧಿಕಾರಿಗಳು ತಾಕೀತು ಮಾಡಿದರು.ಸಂಸದ ಎಸ್.ಮುನಿಸ್ವಾಮಿ, ಶಾಸಕ ಎಂ.ಕೃಷ್ಣಾರೆಡ್ಡಿ, ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ. ಜಿಲ್ಲಾಧಿಕಾರಿ ಅರ್.ಲತಾ, ಜಿಪಂ ಸಿಇಒ ೌಜೀಯಾ ತರನ್ನುಮ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿ ರೇಣುಕಾ ಇತರರಿದ್ದರು.
250 ಎಕರೆ ಜಾಗ ಗುರುತಿಸಿ : ನಗರ ಮತ್ತು ತಾಲೂಕಿನಲ್ಲಿ 8ಸಾವಿರ ಮಂದಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದಾರೆ, ಇದಕ್ಕಾಗಿ ಅಧಿಕಾರಿಗಳು 64 ಎಕರೆ ಸರ್ಕಾರಿ ಜಮೀನು ಗುರುತಿಸಿದ್ದಾರೆ, ಆದರೆ ಇದು ಸಾಲದು, 8ಸಾವಿರ ಮಂದಿಗೆ ನಿವೇಶನ ಹಂಚಬೇಕಾದರೆ ಕನಿಷ್ಠವೆಂದರೂ 250 ಜಮೀನು ಬೇಕು, ಈ ನಿಟ್ಟಿನಲ್ಲಿ ಕ್ರಮವಹಿಸುವಂತೆ ಸಚಿವರು ಅದೇಶಿಸಿದರು.ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ತಾಪಂ ಇಒ ಮಂಜುನಾಥ್ ಅವರಿಂದ ಮಾಹಿತಿ ಪಡೆದ ಸಚಿವರು ನೀರಿನ ಸಮಸ್ಯೆಯಾಗದಂತೆ ಹೊಸ ಕೊಳವೆಬಾವಿ ಕೊರೆಯುವುದು ಅಥವಾ ಖಾಸಗಿ ಕೊಳವೆಬಾವಿಯವರೊಂದಿಗೆ ಒಡಂಬಡಿಕೆ ಮಾಡಿಕೊಂಡು ನೀರು ಸರಬರಾಜು ಮಾಡುವಂತೆ ಸೂಚಿಸಿದರು.ತಿಳಿಸಿದರು.