

ಹಾಸನ: ಎರಡು ಗ್ಯಾಂಗ್‌ಗಳ ನಡುವಿನ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್ ಮಾಸ್ತಿಗೌಡ ಹತ್ಯೆಗೆ ಗುಲ್ಬರ್ಗ ಜೈನಿನಲ್ಲಿರುವ ಯಾಚೇನಹಳ್ಳಿ ಚೇತು ಅಲ್ಲಿಂದಲೇ ಪ್ಲಾನ್ ರೂಪಿಸಿದ್ದನು ಎಂದು ತನಿಖೆ ವೇಳೆ ಗೊತ್ತಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಹರಿರಾಂ ಶಂಕರ್ ಹೇಳಿದರು.
ಚನ್ನರಾಯಪಟ್ಟಣ ಬಸ್ ನಿಲ್ದಾಣ ಸಮೀಪ ನುಗ್ಗೇಹಳ್ಳಿ ಮೂಲದ ಮಾಸ್ತಿಗೌಡ (34) ಎಂಬಾತನನ್ನು ಹಾಡಹಗಲೇ ಮಂಗಳವಾರ ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಮೃತನ ಸಹೋದರಿ ಪಂಕಜಾ ನೀಡಿದ ದೂರು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು ಕೆಲವು ಮಹತ್ವದ ಅಂಶಗಳನ್ನು ಕಲೆ ಹಾಕಿದ್ದಾರೆ. ದೂರಿನಲ್ಲಿ ಹೇಳಿರುವಂತೆ ಹೊಳೆನರಸೀಪುರದ ಹುಲಿವಾಲ ಚೇತು, ಮಂಡ್ಯ ಶಿವು, ಸಾಲಗಾಮೆಯ ರಾಕೇಶ್ ಅಲಿಯಾಸ್ ರಾಖಿ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೊಲೆಯಲ್ಲಿ ಇನ್ನೂ ಒಬ್ಬ ವ್ಯಕ್ತಿ ಭಾಗಿಯಾಗಿರುವ ಶಂಕೆ ಇದೆ. ಆರೋಪಿಗಳು ಸದ್ಯ ತಲೆ ಮರೆಸಿಕೊಂಡಿದ್ದು ಬಂಧಿಸುವ ಪ್ರಯತ್ನದಲ್ಲಿದ್ದೇವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತನ್ನೊಂದಿಗಿದ್ದು ಆ ನಂತರ ಬೇರೆ ಗ್ಯಾಂಗ್ ಕಟ್ಟಿಕೊಂಡು ಹೋಗಿದ್ದ ಮಾಸ್ತಿಗೌಡ ತನ್ನನ್ನು ಮೀರಿ ಬೆಳೆಯುತ್ತಾನೆ ಎಂಬ ಆತಂಕದಲ್ಲಿದ್ದ ಯಾಚೇನಹಳ್ಳಿ ಚೇತು ಎಂಬಾತ ಜೈಲಿನಲ್ಲಿದ್ದರೂ ಅಲ್ಲಿಂದಲೇ ತನ್ನ ಪ್ರಭಾವ ಬೀರಿ ತನ್ನ ಗ್ಯಾಂಗ್‌ನವರಿಗೆ ಪ್ಲಾನ್ ಹೇಳಿಕೊಟ್ಟು ಕೊಲೆ ಮಾಡಿಸಿದ್ದಾನೆ ಎಂದು ಹೇಳಲಾಗುತ್ತಿದೆ. ತನಿಖೆ ಪೂರ್ಣಗೊಂಡ ನಂತರವಷ್ಟೇ ಸತ್ಯಾಂಶ ಬಯಲಾಗುತ್ತದೆ ಎಂದು ವಿವರಿಸಿದರು.