ಮಾಸ್ಟರ್ ಮೈಂಡೆಡ್ ಮಡಿವಾಳಯ್ಯ ಅಂದರ್: ಪೊಲೀಸ್‌ರಿಂದ ತಡವಾಗಿ ಮಾಹಿತಿ ಬಹಿರಂಗ

IMG-20201112-WA0053
Published on

ವಿಜಯಪುರ: ಭೀಮಾತೀರದ ರೌಡಿ ಶೀಟರ್ ಮಹಾದೇವ ಸಾಹುಕಾರ ಭೈರಗೊಂಡ ಹಾಗೂ ಆತನ ಸಹಚರರ ಹತ್ಯೆಗೆ ಸಂಚು ರೂಪಿಸಿದ್ದ ‘ಮಾಸ್ಟರ್ ಮೈಂಡೆಡ್’ ಮಡಿವಾಳಯ್ಯ ಹಿರೇಮಠ ಕೊನೆಗೂ ಅಂದರ್ ಆಗಿದ್ದಾನೆ.

ಮೂಲತಃ ವಿಜಯಪುರದ ಇಂಡಿ ರಸ್ತೆಯ ಬಂಬಳ ಅಗಸಿ ನಿವಾಸಿಯಾಗಿರುವ ಮಡಿವಾಳಯ್ಯ ಊರ್ಫ್ ಮಡು ಪಂಚಯ್ಯ ಹಿರೇಮಠ (33)ನನ್ನು ಡಿ. 2ರಂದೇ ಬಂಧಿಸಲಾಗಿದ್ದು ಪೊಲೀಸ್ ಇಲಾಖೆ ತಡವಾಗಿ ಮಾಹಿತಿ ಬಹಿರಂಗಗೊಳಿಸಿದೆ. ಬಂಧಿತನಿಂದ ಕೃತ್ಯಕ್ಕೆ ಬಳಸಿದ ಒಂದು ಕಾರ್, ಪಿಸ್ತೂಲ್, ಜೀವಂತ ಗುಂಡು ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಅನುಪಮ ಅಗರವಾಲ್ ತಿಳಿಸಿದ್ದಾರೆ.

ತಡವಾಗಿ ಮಾಹಿತಿ ಬಹಿರಂಗ:

ಘಟನೆ ನಡೆದು ಬರೋಬ್ಬರಿ 36 ದಿನಗಳ ಬಳಿಕ ಪೊಲೀಸರು ತೀವ್ರ ಹರಸಾಹಸ ಪಟ್ಟು ಆರೋಪಿ ಮಡಿವಾಳಯ್ಯನನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಡಿವಾಳಯ್ಯ ಊರ್ಫ್ ಮಡು (33) ಸಾಹುಕಾರ ಹತ್ಯೆಗೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿಯಾಗಿದ್ದಾನೆ. ಇದಕ್ಕೂ ಮುನ್ನವೇ 28 ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮಡಿವಾಳಯ್ಯನನ್ನು ಬಂಧಿಸಲು ಸುದೀರ್ಘ ಕಾರ್ಯಾಚರಣೆ ನಡೆಸಿದ್ದು ಕಂಡು ಬಂದಿದೆ.

ಮಡಿವಾಳಯ್ಯನ ಮಾಸ್ಟರ್ ಪ್ಲಾನ್:

ನ. 2 ರಂದು ಅರಕೇರಿ ಬಳಿ ಕನ್ನಾಳ ಕ್ರಾಸ್ ಬಳಿ ಮಹಾದೇವ ಸಾಹುಕಾರ ಭೈರಗೊಂಡ ಕಾರ್‌ಗೆ ಟಿಪ್ಪರ್ ಮೂಲಕ ಡಿಕ್ಕಿ ಹೊಡೆದು ಪೆಟ್ರೋಲ್ ಬಾಂಬ್ ಬಳಸಿ, ಗುಂಡಿನ ದಾಳಿ ನಡೆಸಿ, ಮಚ್ಚು-ಲಾಂಗ್ ಅಷ್ಟೇ ಅಲ್ಲದೇ ಕಲ್ಲು ಮತ್ತು ಕಬ್ಬಿಣದ ರಾಡ್‌ಗಳ ಮೂಲಕ ನಡೆಸಿದ ಭೀಕರ ದಾಳಿಯ ಹಿಂದಿನ ಮಾಸ್ಟರ್ ಮೈಂಡೆಡ್ ಈ ಮಡಿವಾಳಯ್ಯ ಊರ್ಫ್ ಮಡು. ವಿಜಯಪುರದಲ್ಲೊಂದು ಫೈನಾನ್ಸ್ ನಡೆಸುತ್ತಿರುವ ಈ ಮಡಿವಾಳಯ್ಯನೇ ದಾಳಿಗೆ ಸಂಚು ರೂಪಿಸಿದ್ದು ಈತನ ಅಣತಿಯಂತೆಯೇ ದಾಳಿ ನಡೆದಿದ್ದಾಗಿ ಪೊಲೀಸ್ ಅಧಿಕಾರಿಗಳು ತಿಳಿಸುತ್ತಾರೆ.

ಇಂಥ ಪ್ರಮುಖ ಆರೋಪಿಯನ್ನು ಸುದೀರ್ಘ ಕಾರ್ಯಾಚರಣೆ ಮೂಲಕ ಬಂಧಿಸಲಾಗಿದ್ದಲ್ಲದೇ ತಡವಾಗಿ ಮಾಹಿತಿ ಬಹಿರಂಗಗೊಳಿಸಿರುವ ಪೊಲೀಸ್ ಇಲಾಖೆ ನಡೆ ಕೊಂಚ ಅನುಮಾನಕ್ಕೂ ಎಡೆಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net