ಮಾಸ್ಕ್ ಹಾಕದಿದ್ದರೆ ದಂಡ ಖಚಿತ

DC Meeting
Published on

ಬೀದರ್: ಕರೊನಾ ವೈರಸ್ನಿಂದ ದೂರವಿರಲು ರಾಮಬಾಣದಂತಿರುವ ಮುಖಗವಸು (ಮಾಸ್ಕ್) ಧರಿಸದೆ ಇರವವರಿಗೆ ದಂಡ ವಿಧಿಸುವ ಕಾರ್ಯಾಚರಣೆ ಜಿಲ್ಲಾದ್ಯಂತ ತೀವ್ರಗೊಳಿಸುವಂತೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಎಲ್ಲ ತಹಸೀಲ್ದಾರ್ ಸೇರಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಶನಿವಾರ ಡಿಸಿ ಕಚೇರಿ ಸಭಾಂಗಣದಲ್ಲಿ ಕರೊನಾ ಮುಂಜಾಗ್ರತಾ ಕ್ರಮಗಳ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಕರೊನಾ ನಿಯಂತ್ರಣ ಕಾಯರ್ಾಚರಣೆ ಜಿಲ್ಲೆಯ ಎರಡು ನಗರಸಭೆ, ನಾಲ್ಕು ಪುರಸಭೆ ಮತ್ತು ಒಂದು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತೀವ್ರಗೊಳಿಸಬೇಕು. ಯಾವುದೇ ಮುಲಾಜಿಲ್ಲದೆ ದಂಢ ವಿಧಿಸಿ ನಿಯಮ ಉಲ್ಲಂಘಿಸುವವರಿಗೆ ಚುರುಕು ಮುಟ್ಟಿಸಿ ಎಂದರು.
ತಮ್ಮಲ್ಲಿ ಬರುವ ಐಎಲ್ಐ ಮತ್ತು ಸಾರಿ ಪ್ರಕರಣಗಳನ್ನು ಪ್ರತಿದಿನ ಖಾಸಗಿ ಆಸ್ಪತ್ರೆಗಳು ವರದಿ ಮಾಡಬೇಕು. ಈ ಮಾಹಿತಿ ಲಭ್ಯವಾದಲ್ಲಿ ಕೆಮ್ಮು, ನೆಗಡಿ, ಜ್ವರದಂಥ ಲಕ್ಷಣ ಇರುವವರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಿ ಕೋವಿಡ್ ಹರಡದಂತೆ ನೋಡಿಕೊಳ್ಳಲು ಅನುಕೂಲವಾಗುತ್ತದೆ. ಈ ಬಗ್ಗೆ ಎಲ್ಲ ತಾಲೂಕಿನ ಖಾಸಗಿ ಆಸ್ಪತ್ರೆಗಳ ವೈದ್ಯರು ಗಮನಹರಿಸುವಂತೆ ತಾಲೂಕು ಆರೋಗ್ಯಾಧಿಕಾರಿಗಳು ನೋಡಿಕೊಳ್ಳಬೇಕು. ಪ್ರತಿದಿನ ಮಾಹಿತಿ ನೀಡದ ಆಸ್ಪತ್ರೆಗಳ ವಿರುದ್ಧ ಕ್ರಮ ಜರುಗಿಸಲು ವರದಿ ಮಾಡಬೇಕು. ಜಿಲ್ಲಾ ಮಟ್ಟದಲ್ಲಿರುವ ಹಿರಿಯ ವೈದ್ಯಾಧಿಕಾರಿಗಳಿಗೆ ಕಾಲಕಾಲಕ್ಕೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ ಮಾತನಾಡಿ, ಕಂಟೇನ್ಮೆಂಟ್ ಜೋನ್ ವ್ಯಾಪ್ತಿಯಲ್ಲಿ ಐಎಲ್ಐ, ಸಾರಿ ಪ್ರಕರಣಗಳನ್ನು ಗುರುತಿಸಲು ಮನೆ ಮನೆ ಸಮೀಕ್ಷೆ ತೀವ್ರಗೊಳಿಸಬೇಕು. ಆ ಪ್ರದೇಶದಲ್ಲಿನ ಐಎಲ್ಐ, ಸಾರಿ ಪ್ರಕರಣಗಳು ಮತ್ತು ಗರ್ಭಿಣಿಯರು, 10 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳು, 60 ಮೇಲ್ಪಟ್ಟವರನ್ನು ಪತ್ತೆ ಹಚ್ಚಿ ಮುಂದಿನ ಕ್ರಮ ಜರುಗಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತರಾದ ಅಕ್ಷಯ್ ಶ್ರೀಧರ್, ಭಂವರಸಿಂಗ್ ಮೀನಾ, ಡಿಎಚ್ಒ ಡಾ.ವಿ.ಜಿ. ರಡ್ಡಿ, ಬ್ರಿಮ್ಸ್ ನಿರ್ದೇಶಕ ಡಾ.ಶಿವಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net