ಮಾಸ್ಕ್ ಧರಿಸದಿದ್ದವರಿಂದ 3 ಸಾವಿರ ರೂ. ದಂಡ ವಸೂಲಿ

10KMT3
Published on

ಕುಮಟಾ: ಮಾಸ್ಕ್ ಧರಿಸದೇ ಪೇಟೆಯಲ್ಲಿ ಸಂಚರಿಸುವರು ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ನಡೆಸುವವರಿಗೆ ದಂಡ ಹಾಕುವ ಮೂಲಕ ಕುಮಟಾ ಪುರಸಭೆ ಅಧಿಕಾರಿಗಳು ಶುಕ್ರವಾರ ಬಿಸಿ ಮುಟ್ಟಿಸಿದರು.

ಮುಖ್ಯಾಧಿಕಾರಿ ಎಂ.ಕೆ. ಸುರೇಶ, ಪರಿಸರ ಇಂಜಿನಿಯರ್ ಮಹೇಂದ್ರ ಎಂ.ವಿ., ಕಂದಾಯ ನಿರೀಕ್ಷಕ ದಿಲೀಪ ನಾಯ್ಕ ನೇತೃತ್ವದ ತಂಡ ಪಟ್ಟಣ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಮಾಸ್ಕ್ ಧರಿಸದ 30 ಮಂದಿಯಿಂದ ತಲಾ ನೂರು ರೂ.ಗಳಂತೆ 3,000 ರೂ. ದಂಡ ಆಕರಿಸಿದ್ದಾರೆ. ದಂಡ ಪಡೆದವರಿಗೆ ಸ್ಥಳದಲ್ಲೇ ಮಾಸ್ಕ್ ಕೊಟ್ಟು ಧರಿಸಿ ಅಡ್ಡಾಡುವಂತೆ ಅರಿವು ಮೂಡಿಸಲಾಗಿದೆ. ಪುರಸಭೆ ನೌಕರರಾದ ಸುಧೀರ ಗೌಡ, ಶ್ರೀಧರ ಗೌಡ, ಹರ್ಷ ಗಾಂವಕರ, ಗೋವಿಂದ ಇತರರು ಕಾರ್ಯಾಚರಣೆಯಲ್ಲಿ ಸಹಕರಿಸಿದರು. ಮುಖ್ಯಾಧಿಕಾರಿ ಸುರೇಶ ಎಂ.ಕೆ. ವಿಜಯವಾಣಿಯೊಂದಿಗೆ ಮಾತನಾಡಿ, ಕಳೆದ 3 ದಿನದಿಂದ ತಾಲೂಕಿನಲ್ಲಿ ಮಧ್ಯಾಹ್ನ 2ರಿಂದ ಬೆಳಗ್ಗೆ 5ರವರೆಗೆ ಬಂದ್ ಆಚರಿಸುವಂತೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ನೀಡಿದ ಕರೆಗೆ ಎಲ್ಲರೂ ಸ್ವಯಂಪ್ರೇರಿತರಾಗಿ ಸ್ಪಂದಿಸುತ್ತಿದ್ದಾರೆ. ಸಾರ್ವಜನಿಕರು ಕೂಡ ಮನೆಯಿಂದ ಹೊರಬಂದಾಗ ಸ್ವಯಂ ಪ್ರೇರಣೆಯಿಂದ ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಕರೊನಾ ನಿಯಂತ್ರಿಸುವಲ್ಲಿ ಮೊದಲ ಹೆಜ್ಜೆಯಾಗಿದೆ. ಪ್ರತಿಯೊಬ್ಬರೂ ಇದನ್ನು ಪಾಲಿಸಬೇಕು. ಮಾಸ್ಕ್ ಧರಿಸದಿದ್ದಲ್ಲಿ ದಂಡ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net