ಮಾಸ್ಕ್ ಧರಿಸದವರಿಗೆ ಸಚಿವರ ಎಚ್ಚರಿಕೆ

7 vikram 6
Published on

ಧಾರವಾಡ: ಕರೊನಾ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಜನರಲ್ಲಿ ಸುರಕ್ಷತಾ ಕ್ರಮಗಳ ತಿಳಿವಳಿಕೆ ನೀಡುತ್ತಿದ್ದಾರೆ. ಆದರೆ, ಅಧಿಕಾರಿಗಳೇ ನಿಯಮ ಪಾಲಿಸುತ್ತಿಲ್ಲ. ಇಂತಹ ಅಧಿಕಾರಿಗಳಿಗೆ ಕೇಂದ್ರ ಸಚಿವರು ತರಾಟೆಗೆ ತೆಗೆದುಕೊಂಡ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಭೆಗೆ ಆಗಮಿಸಿದ್ದ ಕೆಲ ಅಧಿಕಾರಿಗಳು ಮಾಸ್ಕ್​ಅನ್ನು ಮೂಗಿನಿಂದ ಕುತ್ತಿಗೆಗೆ ಇಳಿಸಿದ್ದರೆ, ವಿಶೇಷ ಭೂ ಸ್ವಾಧೀನಾಧಿಕಾರಿ, ನೋಡಲ್ ಅಧಿಕಾರಿಯೂ ಆಗಿರುವ ಶಾರದಾ ಕೋಲ್ಕಾರ ಸೇರಿ ಇನ್ನೂ ಕೆಲವರು ಮಾಸ್ಕ್ ಧರಿಸದೆ ಆಗಮಿಸಿದ್ದರು.

ಇದನ್ನು ಗಮನಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಗರಂ ಆಗಿ ತರಾಟೆಗೆ ತೆಗೆದುಕೊಂಡರು. ಜನರಿಗೆ ತಿಳಿವಳಿಕೆ ನೀಡುವ ಅಧಿಕಾರಿಗಳಿಗೆ ಸುರಕ್ಷತೆ ಕುರಿತು ಗಂಭೀರತೆ ಇರಬೇಕು. ಮಾಸ್ಕ್ ಧರಿಸದೆ ಸಭೆಗೆ ಆಗಮಿಸಿದವರನ್ನು ಸಭೆಯಿಂದ ಹೊರಗೆ ಕಳುಹಿಸಿ, ಇಲ್ಲವೆ ಅವರಿಗೆ ಮಾಸ್ಕ್ ನೀಡಿ ಎಂದು ಖಡಕ್ ಎಚ್ಚರಿಕೆ ನೀಡಿದರು.

ಇದರಿಂದ ಜಾಗ್ರತರಾದ ಅಧಿಕಾರಿಗಳು ಕೂಡಲೆ ತಮ್ಮ ಕುತ್ತಿಗೆಗೆ ಇಳಿಸಿದ್ದ ಮಾಸ್ಕ್​ಗಳನ್ನು ಮೂಗಿಗೆ ಏರಿಸಿದರೆ, ಶಾರದಾ ಕೋಲ್ಕಾರ ಅವರಿಗೆ ಸಿಬ್ಬಂದಿಯೊಬ್ಬರು ಹೊಸ ಮಾಸ್ಕ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net