

ತುಮಕೂರು: ಮಾಸ್ಕ್ ಇಲ್ಲದೆ ಮನೆಯಿಂದ ಹೊರಬರುವುದನ್ನು ಸದ್ಯಕ್ಕೆ ಯಾರೊಬ್ಬರು ಕಲ್ಪಿಸಿಕೊಳ್ಳಬೇಡಿ, ಆರೋಗ್ಯ ದೃಷ್ಟಿಯಿಂದ ದಂಢ ವಿಧಿಸುವುದು ಅನಿವಾರ್ಯ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಹೇಳಿದರು.
ಗುರುವಾರ ಮಾಸ್ಕ್ ಡೇ ಅಂಗವಾಗಿ ಜಿಲ್ಲಾಡಳಿತ ಗುರುವಾರ ಆಯೋಜಿಸಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. ಮಾಸ್ಕ್ ಧರಿಸದೆ ಓಡಾಡುವವರಿಗೆ ಪಂಚಾಯಿತಿ ಬಿಲ್ ಕಲೆಕ್ಟರ್‌ನಿಂದ ಕಾರ್ಪೋರೇಷನ್ ಕಮೀಷನರ್ ಕಚೇರಿಯ ಬಿಲ್‌ಕಲೆಕ್ಟರ್ ಹಾಗೂ ಪೊಲೀಸರಿಗೆ ದಂಡ ವಿಧಿಸುವ ಅಧಿಕಾರ ನೀಡಲಾಗಿದೆ, ಜನರು ಮಾಸ್ಕ್ ಧರಿಸುವುದನ್ನು ತಪ್ಪಿಸಬಾರದು ಎಂದು ಮನವಿ ಮಾಡಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಸರ್ಕಾರ ಮೊದಲಿನಿಂದಲೂ ಸಾರ್ವಜನಿಕರಿಗೆ ಮಾಸ್ಕ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಿಕೊಂಡು ಬರುತ್ತಿದೆ. ಕೋವಿಡ್-19 ತಡೆಯುವ ನಿಟ್ಟಿನಲ್ಲಿ ಇಂದು ಮಾಸ್ಕ್ ದಿನಾಚರಣೆ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಮಾಸ್ಕ್ ಧರಿಸುವುದರಿಂದ ಹೆಚ್ಚಿನ ಮಟ್ಟಿಗೆ ಕೋವಿಡ್ 19 ತಡೆಯಬಹುದು ಎಂಬ ವಿಚಾರ ಎಲ್ಲರಿಗೂ ತಿಳಿದಿದ್ದರೂ ಜನರು ಮಾಸ್ಕ್ ಹಾಕಿಕೊಂಡು ಸಂಚರಿಸುವುದರಲ್ಲಿ ಆಸಕ್ತಿ ತೋರುತ್ತಿಲ್ಲ ಎಂದು ಬೇಸರಿಸಿದರು.
ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ, ಡಿಎಚ್‌ಒ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವೀರಭದ್ರಯ್ಯ, ಉಪವಿಭಾಗಾಧಿಕಾರಿ ಅಜಯ್, ತಹಸೀಲ್ದಾರ್ ಮೋಹನ್‌ಕುಮಾರ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಚೇರ್‌ಮನ್ ನಾಗಣ್ಣ ಇದ್ದರು.