ಮಾಸ್ಕ ಧರಿಸುವುದು ಜೀವನ ಶೈಲಿ ಭಾಗವಾಗಲಿ

1806Klb08
Published on

ಕಲಬುರಗಿ: ಕರೊನಾ ವೈರಸ್ ನಿಯಂತ್ರಿಸಲು ರಾಜ್ಯ ಸಕರ್ಾರದ ನಿರ್ಧಾರದಂತೆ ನಗರದಲ್ಲಿ ಮಾಸ್ಕ್ ದಿನ(ಮುಖಗವಸು ದಿನ)ಯನ್ನು ಇದೇ ಮೊದಲ ಸಲ ಗುರುವಾರ ಆಚರಿಸಲಾಯಿತು. ಕಡ್ಡಾಯವಾಗಿ ಮಾಸ್ಕ್ ಧರಿಸಲು ಜನ ಜಾಗೃತಿ ಮೂಡಿಸುವ ಪ್ರಯತ್ನ ಜನಪ್ರತಿನಿಧಿಗಳು, ಅಧಿಕಾರಿಗಳು, ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಮಾಡಿದರು.
ನಗರದ ಸರ್ದಾರ್ ವಲ್ಲಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಗೃತಿ ಜಾಥಾ ನಡೆಸಲಾಯಿತು. ಮಾಸ್ಕ್ ಪೆನೋ ಹೀರೋ ಬನೋ ಎಂಬ ಘೋಷಣೆ ಕೂಗುವ ಮೂಲಕ ಪ್ರತಿಯೊಬ್ಬರು ಮಾಸ್ಕ್ ಧರಿಸಲು ಪ್ರೋತ್ಸಾಹಿಸಲಾಯಿತು. ಜಾಥಾದುದ್ದಕ್ಕೂ ಮಾಸ್ಕ್ ಧರಿಸದೆ ಓಡಾಡುತ್ತಿದ್ದವರಿಗೆ ಮಾಸ್ಕ್ ವಿತರಣೆ ಮಾಡಿ ಧರಿಸಲು ಸಲಹೆ ನೀಡಲಾಯಿತು. ಮಾನವ ಸರಪಳಿ ನಿರ್ಮಿಸಿ ಮಹಾಮಾರಿ ವಿರುದ್ಧ ಶಕ್ತಿ ಪ್ರದರ್ಶನ ಮಾಡಲಾಯಿತು.
ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ, ನಗರ ಪೊಲೀಸ್ ಆಯುಕ್ತಾಲಯ ಜತೆಗೂಡಿ ಆಯೋಜಿಸಿದ್ದ ಜಾಥಾಕ್ಕೆ ಪಟೇಲ್ ವೃತ್ತದಲ್ಲಿ ಸಂಸದ ಡಾ.ಉಮೇಶ ಜಾಧವ್ ಚಾಲನೆ ನೀಡಿದರು. ಡಿಸಿ ಶರತ್, ಸಂಸದ ಡಾ.ಜಾಧವ್, ಕಮೀಷನರ್ ಸತೀಶಕುಮಾರ, ಇತರರು ಮಾತನಾಡಿ ಮಾಸ್ಕ್ ಧರಿಸುವುದು ನಮ್ಮೆಲ್ಲರ ಜೀವನ ಶೈಲಿನ ಭಾಗವಾಗಿಸಿಕೊಳ್ಳುವ ಮೂಲಕ ಕರೊನಾ ತಡೆಗಟ್ಟಲು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಜಿಪಂ ಅಧ್ಯಕ್ಷೆ ಸುವರ್ಣ ಮಾಲಾಜಿ, ನಗರ ಪೊಲೀಸ್ ಕಮೀಷನರ್ ಎನ್.ಸತೀಶಕುಮಾರ, ಜಿಪಂ ಸಿಇಒ ಡಾ. ಪಿ.ರಾಜಾ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಡಿಸಿಪಿ ಕಿಶೋರ ಬಾಬು, ಎಸ್ಪಿ ಯಡಾ ಮಾರ್ಟಿನ್, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎ.ಜಬ್ಬಾರ್, ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ್ ಸೇರಿ ಜಿಮ್ಸ್ ವಿದ್ಯಾರ್ಥಿಗಳು ಕೈಯಲ್ಲಿ ಕರೊನಾ ತಡೆಗಟ್ಟುವ ಘೋಷಣೆಗಳಿರುವ ಬಿತ್ತಿಪತ್ರಗಳನ್ನು ಹಿಡಿದುಕೊಂಡು ಹೋಗುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ಜಾಥಾ ಡಿಸಿ ಕಚೇರಿಗೆ ಬರುತ್ತಲೇ ಎಲ್ಲರೂ ಸೇರಿಕೊಂಡು ಮಾನವ ಸರಪಳಿ ನಿರ್ಮಿಸಿ ಕರೊನಾ ವಿರುದ್ಧ ಸೆಣಸುವ ಪಣತೊಟ್ಟರು, ಅಲ್ಲದೆ ಜನರು ಕೈಜೋಡಿಸಬೇಕು ಕರೆ ನೀಡಿದರು. ಜಿಲ್ಲಾಡಳಿತದಿಂದ ಆಯೋಜಿಸಿದ ಈ ಜಾಥಾಗೆ ನಗರ ಪೊಲೀಸ್ ಮತ್ತು ಜಿಮ್ಸ್ ಕಾಲೇಜು ವಿದ್ಯಾರ್ಥಿಗಳು ಸಾಥ್ ನೀಡಿದರು.
ಜಾಥಾದಲ್ಲಿ ಜಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಫಿಯೂದ್ದಿನ್, ಸರ್ಕಾರಿ ನೌಕಕರ ಸಂಘದಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರಾವ ಇಟಗಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರತಿನಿಧಿಗಳು, ಅರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಶೇ.75ರಷ್ಟು ರಕ್ಷಣೆ ಸಂಸದ ಡಾ. ಉಮೇಶ್ ಜಾಧವ ಅವರು ಮಾತನಾಡಿ, ಕಡ್ಡಾಯವಾಗಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು, ಅಂದಾಗ ಮಾತ್ರ ಕರೊನಾ ಸೋಂಕಿನಿಂದ ಶೇ.75ರಷ್ಟು ರಕ್ಷಣೆ ಪಡೆಯಬಹುದು. ಅಲ್ಲದೆ ಮೇಲಿಂದ ಮೇಲೆ 20 ರಿಂದ 30 ಸೆಕೆಂಡ್ವರೆಗೆ ಸಾಬೂನು ಹಚ್ಚಿಕೊಂಡು ಕೈ ತೊಳೆದುಕೊಳ್ಳುವುದು ಮತ್ತು ದೈಹಿಕ ಅಂತರ ಕಾಪಾಡುವುದು ನಮ್ಮ ಜೀವನದ ಭಾಗವಾಗಬೇಕಿದೆ. ಮುಂದಿನ 6 ತಿಂಗಳು ಕರೊನಾ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದರು.

200 ರೂ. ದಂಡ
ಕರೊನಾ ನಿಯಂತ್ರಣಕ್ಕೆ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಓಡಾಡಬೇಕು. ಇಲ್ಲದಿದ್ದರೆ 200 ರೂ. ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಶರತ್ ಬಿ. ಎಚ್ಚರಿಕೆ ನೀಡಿದರು. ಕರೊನಾ ಬಗ್ಗೆ ಆಲಸ್ಯ ಮಾಡಿದಲ್ಲಿ ಕೆಟ್ಟ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.

ಮಹಾಮಾರಿ ಕರೊನಾ ಸಮುದಾಯವಾಗಿ ಹರಡದಂತೆ ನೋಡಿಕೊಳ್ಳಲು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು. ಸರ್ಕಾರ ಕಡ್ಡಾಯವಾಗಿ ಪಾಲಿಸುವ ನಿಯಮಗಳನ್ನು ಜಾರಿಗೆ ತಂದಿದ್ದು ಅವನ್ನು ಸಾರ್ವಜನಿಕರು ಪಾಲನೆ ಮಾಡಬೇಕು.
| ಎನ್.ಸತೀಶಕುಮಾರ ಪೊಲೀಸ್ ಕಮೀಷನರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net