ಮಾಸಿಕ ಸಂಬಳ ಹೆಚ್ಚಳ, ಇನ್ನಿತರೆ ಸೌಲಭ್ಯ ಒದಗಿಸಲು ಮನವಿ

28 ckm 1
ಚಿಕ್ಕಮಗಳೂರು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ ಅಕ್ಷರ ದಾಸೋಹ ಕಾರ್ಯಕರ್ತೆಯರ ಫೆಡರೇಷನ್ ಕಾರ್ಯಕರ್ತೆಯರು ಬಿಸಿಯೂಟ ಕಾರ್ಯಕರ್ತೆಯರಿಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸರ್ಕಾರ ಮಾಸಿಕ ಸಂಬಳ ಹೆಚ್ಚಳ, ಇಎಸ್‌ಐ ಮತ್ತು ಪಿಎಫ್ ಸೌಲಭ್ಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
Published on

ಚಿಕ್ಕಮಗಳೂರು: ಬಿಸಿಯೂಟ ಕಾರ್ಯಕರ್ತೆಯರಿಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸರ್ಕಾರ ಮಾಸಿಕ ಸಂಬಳ ಹೆಚ್ಚಳ, ಇಎಸ್‌ಐ ಮತ್ತು ಪಿಎಫ್ ಸೌಲಭ್ಯ ಒದಗಿಸಿಕೊಡಬೇಕು ಎಂದು ಅಕ್ಷರ ದಾಸೋಹ ಕಾರ್ಯಕರ್ತೆಯರ ಫೆಡರೇಷನ್ ಕಾರ್ಯಕರ್ತೆಯರು ಮಂಗಳವಾರ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಫೆಡರೇಷನ್ ಅಧ್ಯಕ್ಷ ಜಿ.ರಘು, ಇಂದಿನ ಬೆಲೆ ಏರಿಕೆದಿಂದಾಗಿ ಬಿಸಿಯೂಟ ಮಹಿಳಾ ಕಾರ್ಯಕರ್ತೆಯರು ಜೀವನ ನಡೆಸುವುದು ಕಷ್ಟಕರವಾಗಿದೆ. ಶೀಘ್ರವೇ ಕಾರ್ಯಕರ್ತೆಯರ ಸಮಸ್ಯೆ ಬಗೆಹರಿಸದಿದ್ದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಬಿಸಿಯೂಟ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸಿ ಕಡಿಮೆ ವೆ ತ್ತದ ಸಂಬಳ ಪಡೆಯುತ್ತಿದ್ದಾರೆ. ಪ್ರಸ್ತುತ ಬೆಲೆಏರಿಕೆಯಿಂದ ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ ಸೇರಿದಂತೆ ಇನ್ನಿತರೆ ಖರ್ಚುಗಳಿಗೆ ಬಹಳಷ್ಟು ಕಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯಸರ್ಕಾರ ಚುನಾವಣಾ ಪೂರ್ವದಲ್ಲಿ ೬ನೇ ಗ್ಯಾರಂಟಿಯಾಗಿ ಬಿಸಿಯೂಟ ಕಾರ್ಯಕರ್ತೆಯರಿಗೆ ೬ ಸಾವಿರ ಸಂಬಳ ನೀಡುವುದಾಗಿ ಘೋಷಿಸಿದೆ. ಆದರೂ ಸಹ ಈವರೆಗೆ ಸಂಬಳ ಹೆಚ್ಚಿಸದೆ ಮಹಿಳಾ ಶೋಷಣೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ೧೩ ವರ್ಷಗಳಿಂದ ನೀಡಬೇಕಾಗಿದ್ದ ಶೇ. ೬೦ರಷ್ಟು ಸಂಬಳವನ್ನು ನೀಡದೇ ಅಲ್ಪಮೊತ್ತದ ಸಂಬಳ ನೀಡಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದರು.

ಸಾವಿರಾರು ಮಕ್ಕಳ ವಿದ್ಯಾಭ್ಯಾಸ ಮಾಡುತ್ತಿರುವ ಶಾಲೆಗಳಲ್ಲಿ ಅಡುಗೆ ವೃತ್ತಿ ಕಾರ್ಯಕರ್ತೆಯರಿಗೆ ಅಪಘಾತ, ತುರ್ತು ಚಿಕಿತ್ಸೆಗೆ ಸರ್ಕಾರದಿಂದ ನಿಧಿಯಿಲ್ಲ. ಹೀಗಾಗಿ ರಾಜ್ಯಾದ್ಯಂತ ಹಲವಾರು ಮಂದಿ ಮೃತಪಟ್ಟಿದ್ದಾರೆ. ಕಡಿಮೆ ವೇತನಕ್ಕೆ ದುಡಿಯುವವರಿಗೆ ಪಿಎಫ್, ಇಎಸ್‌ಐ ಸೌಲಭ್ಯಗಳಿಂದ ವಂಚಿತರಾಗುವುದಲ್ಲದೇ ನಿವೃತ್ತಿ ವೇತನ ನಂತರ ಜೀವನ ಏನೆಂಬುದು ತಿಳಿದಿಲ್ಲ ಎಂದು ಹೇಳಿದರು.

ಫೆಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ವಿಜಯ್‌ಕುಮಾರ್ ಮಾತನಾಡಿ, ಮಕ್ಕಳಿಗೆ ಮೊಟ್ಟೆ ಸುಲಿದ ಹಣ ನೀಡಿಲ್ಲ. ಅನೇಕ ಹೋರಾಟದ ನಂತರ ೨೦೨೨ರಲ್ಲಿ ನಿವೃತ್ತಿಗೊಂಡ ಕಾರ್ಯಕರ್ತೆಯರಿಗೆ ಸೇವೆಗೆ ಅನುಗುಣವಾಗಿ ೩೦ ರಿಂದ ೪೦ ಸಾವಿರ ನೀಡುವುದಾಗಿ ಘೋಷಿಸಿದ್ದು, ಇದು ಕೂಡಾ ಯಾವುದಕ್ಕೂ ಸಾಲದ ಮೊತ್ತವಾಗಿದೆ ಎಂದರು.

ಆ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯಕರ್ತೆಯರಿಗೆ ೨ ಲಕ್ಷ ರೂ. ನಿವೃತ್ತಿ ಇಡಿಗಂಟು ನೀಡಬೇಕು. ೨೦೨೨ರ ನಿವೃತ್ತಿಗೊಂಡ ಮತ್ತು ೫ ವರ್ಷಗಳಿಂದ ಸೇವೆ ಸಲ್ಲಿಸಿರುವ, ಮಕ್ಕಳ ಕೊರತೆಯಿಂದಾಗಿ ಸೇವೆಯಿಂದ ಕೈ ಬಿಡಲಾದ ಕಾರ್ಯಕರ್ತೆಯರಿಗೂ, ಸೇವೆಯಲ್ಲಿ ಮೃತಟ್ಟವರಿಗೂ ಇಡಿಗಂಟು ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಫೆಡರೇಷನ್ ಉಪಾಧ್ಯಕ್ಷ ಕೆಲವಳ್ಳಿ ಕಳಸಪ್ಪ, ತಾಲೂಕು ಮಹಿಳಾ ಅಧ್ಯಕ್ಷೆ ಇಂದುಮತಿ, ಉಪಾಧ್ಯಕ್ಷರಾದ ನಾಗಮಣಿ, ಗ್ರೇಸಿ, ಕಾರ್ಯದರ್ಶಿ ಶಮೀಮ್ ಬಾನು, ಸಹ ಕಾರ್ಯದರ್ಶಿ ಭಾಗ್ಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net