ಮಾಸಿಕ ರೂ.55 ಸಾವಿರಕ್ಕೆ ಮಳಿಗೆ ಹರಾಜು!

bhr pp
Published on

ಬಾಳೆಹೊನ್ನೂರು: ಪಟ್ಟಣದ ಬಸ್ ನಿಲ್ದಾಣದಲ್ಲಿ ಎನ್.ಆರ್.ಪುರ ತಾಲೂಕು ಪಂಚಾಯಿತಿಯಿಂದ ನಿರ್ಮಿಸಿರುವ ಅಂಗಡಿ ಮಳಿಗೆಯು ಬಾಡಿಗೆಗೆ ಅತಿ ಹೆಚ್ಚಿನ ದರದಲ್ಲಿ ಹರಾಜಾಗಿ ದಾಖಲೆ ಬರೆದಿದೆ.

ಬಿ.ಕಣಬೂರು ಗ್ರಾಪಂ ಸಭಾಂಗಣದಲ್ಲಿ ಬುಧವಾರ ತಾಪಂ ಇಒ ನವೀನ್‌ಕುಮಾರ್ ನೇತೃತ್ವದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 59 ಜನ ಹಲವು ಮಳಿಗೆಗಳಿಗೆ ಹಣ ಪಾವತಿಸಿ ಬಿಡ್‌ದಾರರಾಗಿದ್ದಾರೆ. ಬಿಡ್‌ದಾರರ ಪೈಕಿ ಪಟ್ಟಣದ ಹೂವಿನ ವ್ಯಾಪಾರಿ ರಾಜೇಶ್ ಎಂಬುವವರು ಅತಿ ಹೆಚ್ಚು ದರಕ್ಕೆ ಅಂದರೆ ಮಾಸಿಕ 55 ಸಾವಿರ ರೂಪಾಯಿಗೆ ಹರಾಜು ಕೂಗಿ ಮಳಿಗೆಯಲ್ಲಿ ವ್ಯಾಪಾರದ ಹಕ್ಕನ್ನು ಪಡೆದುಕೊಂಡಿದ್ದಾರೆ.

ಮಳಿಗೆಯು 21*15 ಅಳತೆಯನ್ನು ಹೊಂದಿದ್ದು, ತಾಪಂನಿಂದ ನಿರ್ಮಾಣ ಮಾಡುವಾಗ 5 ಲಕ್ಷದಿಂದ 6 ಲಕ್ಷ ರೂ. ವೆಚ ತಗುಲಿದೆ ಎಂದು ತಿಳಿದುಬಂದಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಈ ಅಳತೆಯ ಅಂಗಡಿ ಮಳಿಗೆಗೆ ಅತಿ ಹೆಚ್ಚು ಬಾಡಿಗೆ ಇದಾಗಿದ್ದು, ಇದು ಸಾರ್ವಜನಿಕರ ಹುಬ್ಬೇರಿಸುವಂತೆ ಮಾಡಿದೆ.

ಮಳಿಗೆಗೆ 55 ಸಾವಿರ ಬಾಡಿಗೆಯೊಂದಿಗೆ ಶೇ.18 ಜಿಎಸ್‌ಟಿ ವಿಧಿಸಲಿದ್ದು, ಜಿಎಸ್‌ಟಿ ಮೊತ್ತ 9900 ರೂ. ಆಗಲಿದೆ. ಮಳಿಗೆಯ ಒಟ್ಟು ಬಾಡಿಗೆ ಮಾಸಿಕ 64900 ರೂ. ಆಗಲಿದೆ.

ತಾಪಂ ಮಳಿಗೆ ಇಷ್ಟು ದೊಡ್ಡ ಮೊತ್ತಕ್ಕೆ ಹರಾಜಾಗುತ್ತಿದ್ದಂತೆ ಪಟ್ಟಣದಲ್ಲಿ ಬಿ.ಕಣಬೂರು ಗ್ರಾಪಂಗೆ ಒಳಪಡುವ ಅಂಗಡಿ ಮುಂಗಟ್ಟುಗಳ ಬಾಡಿಗೆದಾರರು, ಇತರ ಖಾಸಗಿ ಬಾಡಿಗೆದಾರರು ಆತಂಕಕ್ಕೀಡಾಗಿದ್ದಾರೆ. ತಾಪಂ ಮಳಿಗೆ ಹೆಚ್ಚು ದರಕ್ಕೆ ಹರಾಜಾಗಿರುವ ಹಿನ್ನೆಲೆಯಲ್ಲಿ ಗ್ರಾಪಂ ಹಾಗೂ ಖಾಸಗಿ ಕಟ್ಟಡಗಳ ಮಾಲೀಕರು ಸಹ ಇನ್ನುಮುಂದೆ ಹೆಚ್ಚು ಬಾಡಿಗೆ ವಿಧಿಸಲಿದ್ದಾರೆಯೇ ಎಂಬ ಚಿಂತೆಗೆ ಒಳಗಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net