ಮಾಸಿಕ ಪಿಂಚಣಿ ಸಮಸ್ಯೆಗೆ ಪರಿಹಾರ

KDR gpp
ಬಿಸಲೆರೆ ಗ್ರಾಮದ ಬನಶಂಕರಿ ದೇವಾಲಯದಲ್ಲಿ ಶನಿವಾರ ನಡೆದ ಗ್ರಾಮಸ್ಪಂದನ ಕಾರ್ಯಕ್ರಮದಲ್ಲಿ ತರೀಕೆರೆ ಉಪವಿಭಾಗಾಧಿಕಾರಿ ಡಾ. ಕಾಂತರಾಜು ಮಾತನಾಡಿದರು.
Published on

ಕಡೂರು: ವೃದ್ಧಾಪ್ಯ ವೇತನದಲ್ಲಿ ಸಮಸ್ಯೆ ಉಂಟಾಗಿರುವವರು ಹಾಗೂ ವೇತನ ನಿಂತು ಹೋಗಿರುವವರು ಕೂಡಲೇ ಅರ್ಜಿ ಸಲ್ಲಿಸಬಹುದು ಎಂದು ತರೀಕೆರೆ ಉಪವಿಭಾಗಾಧಿಕಾರಿ ಡಾ. ಕಾಂತರಾಜು ತಿಳಿಸಿದರು

ಬಿಸಲೆರೆ ಗ್ರಾಮದ ಬನಶಂಕರಿ ದೇವಾಲಯದಲ್ಲಿ ಶನಿವಾರ ನಡೆದ ಗ್ರಾಮಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿ, ಪಹಣಿಯಲ್ಲಿ ಲೋಪದೋಷಗಳು, ತತ್ಕಾಲ್ ಪೋಡಿ ದುರಸ್ತಿ, ಪೌತಿಖಾತೆ ಆಂದೋಲನವನ್ನು ಸರ್ಕಾರ ಶೀಘ್ರದಲ್ಲಿಯೇ ತಂತ್ರಾಂಶದ ಮೂಲಕ ಚಾಲನೆ ನೀಡಲಿದ್ದು, ದುರಸ್ತಿ ಕಾರ್ಯವನ್ನು ತಂತ್ರಾಂಶದ ಮೂಲಕವೇ ನಡೆಸಿಕೊಡಲಾಗುತ್ತದೆ. ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ನಮೂದಿಸಿ ಕಾಲಮಿತಿಯೊಳಗೆ ಪರಿಹರಿಸಿಕೊಡುವ ಕಾರ್ಯ ಮಾಡಲಾಗುತ್ತದೆ ಎಂದರು.

ಅರೇಹಳ್ಳಿ ಗ್ರಾಮದ ಶಿವು ಮಾತನಾಡಿ, ಬಿಸಲೆರೆ ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ನೀರು ಸರಾಗವಾಗಿ ಹರಿಯದೆ ಕೊಳಚೆ ಪ್ರದೇಶವಾಗಿದೆ. ಗ್ರಾಪಂಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೆರೆ ಒತ್ತುವರಿ ಸಮಸ್ಯೆ ಸರಿಪಡಿಸಿಕೊಡುವಂತೆ ಗ್ರಾಮಸ್ಥರ ಜತೆಗೂಡಿ ಒತ್ತಾಯಿಸಿದರು.

ಅಸಮರ್ಪಕವಾಗಿ ಕೂಡಿದ್ದ ಚರಂಡಿ ವ್ಯವಸ್ಥೆ ನೋಡಲು ಸ್ಥಳಕ್ಕೆ ತೆರಳಿದ ಎಸಿ ಕಾಂತರಾಜು, ಈ ಬಾರಿಯ ಕ್ರಿಯಾಯೋಜನೆಯಲ್ಲಿ ಚರಂಡಿ ಕಾಮಗಾರಿಯನ್ನು ನಿರ್ಮಿಸಿಕೊಡುವಂತೆ ಪಿಡಿಒ ನಂಜುಂಡಮ್ಮ ಅವರಿಗೆ ಸೂಚಿಸಿದರು.

ಸರ್ವೇ ನಂ 111/ಎ ನಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಆರ್‌ಟಿಸಿ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದು, ಕಂದಾಯ ಇಲಾಖೆ ಯಾವುದೇ ಉತ್ತರ ನೀಡುತ್ತಿಲ್ಲ. ಪರಿಹಾರ ನೀಡಿ ಎಂದು ಗ್ರಾಮದ ಕೆಂಪರಾಜ್ ಒತ್ತಾಯಿಸಿದರು. ಇ-ಸ್ವತ್ತು ನೀಡುತ್ತಿಲ್ಲ ಎಂದು ಬಂದಿದ್ದ ಅರ್ಜಿಗಳಿಗೆ ಉಪ ವಿಭಾಗಾಧಿಕಾರಿಗಳು ಹಕ್ಕುಪತ್ರ ಇದ್ದರೆ ಮಾತ್ರ ಇ-ಸ್ವತ್ತು ನೀಡಲು ಸಾಧ್ಯ. ಮೊದಲು ಹಕ್ಕುಪತ್ರ ಪಡೆಯಿರಿ. ನಂತರ ಇ-ಸ್ವತ್ತಿಗೆ ಅರ್ಜಿ ಸಲ್ಲಿಸಿದರೆ ನೀಡುತ್ತಾರೆ ಎಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.

ದಾನಿಗಳು ನೀಡಿರುವ ಜಾಗವನ್ನು ಸರ್ವೇ ಮಾಡಬೇಕು. ಸರ್ಕಾರಿ ಶಾಲೆಗೆ ಕಾಂಪೌಂಡ್ ನಿರ್ಮಾಣಕ್ಕೆ ಸರ್ವೇ ಮಾಡಿಸಲು ಮುಖ್ಯ ಶಿಕ್ಷಕ ಅರ್ಜಿ ಸಲ್ಲಿಸಿದ್ದು, ಕೂಡಲೆ ಸರ್ವೇೆ ಇಲಾಖೆಗೆ ಸೂಚನೆ ನೀಡಿ ಅಳತೆ ಮಾಡಿಸಿಕೊಡುವುದಾಗಿ ಉತ್ತರಿಸಿದರು.

ಗ್ರಾಪಂ ಉಪಾಧ್ಯಕ್ಷೆ ವಸಂತಕುಮಾರಿ, ಸದಸ್ಯರಾದ ರಾಜಪ್ಪ, ಬಸವರಾಜಪ್ಪ, ಪ್ರಭುಕುಮಾರ್, ಮುಖಂಡರಾದ ರಮೇಶ್, ನಂದೀಶ್, ರಮೇಶ್, ಉಪತಹಸೀಲ್ದಾರ್ ಮಾಲಾ, ಹಿರೇನಲ್ಲೂರು ಕಂದಾಯ ನಿರೀಕ್ಷಕ ರವಿ, ವೆಂಕಟೇಶ್ ಇತರರಿದ್ದರು.

ಭದ್ರಾ ಮೇಲ್ದಂಡೆ ಯೋಜನೆಯಡಿ ಹೆಚ್ಚುವರಿ ಭೂಮಿ ಸ್ವಾಧೀನಪಡಿಸಿಕೊಂಡವರಿಗೆ ಇನ್ನೂ ಹಣ ನೀಡಿಲ್ಲ ಎಂಬ ಬಿಸಲೆರೆ ಗ್ರಾಮಸ್ಥರ ದೂರಿಗೆ ಪ್ರತಿಕ್ರಿಯಿಸಿದ ಎಸಿ ಕಾಂತರಾಜ್, ಕೂಡಲೆ ಹಣ ಬಿಡುಗಡೆಗೆ ಸೂಚಿಸುವುದಾಗಿ ತಿಳಿಸಿದರು. ಬಿಸಲೆರೆ ಗ್ರಾಮದ ಸಮೀಪದ ಕೆರೆಯನ್ನು ಅರಣ್ಯ ಎಂದು ನಮೂದಿಸಿರುವುದರಿಂದ ಗ್ರಾಮದ ಬಡವರು ಮನೆ ಕಟ್ಟಿಕೊಳ್ಳಲು ಮಣ್ಣು ಸಿಗುತ್ತಿಲ್ಲ. ಮಣ್ಣು ತೆಗೆಯಲು ಅರಣ್ಯ ಇಲಾಖೆ ಬಿಡುತ್ತಿಲ್ಲ. ಮಣ್ಣು ಪಡೆಯಲು ಅವಕಾಶ ನೀಡಿ ಎಂದು ಗ್ರಾಮಸ್ಥರು ಮನವಿ ಮಾಡಿದರು. ಅರಣ್ಯ ಇಲಾಖೆ ಸಿಬ್ಬಂದಿ ಉತ್ತರಿಸಿ, ಈ ಹಿಂದಿನಿಂದಲೂ ಅರಣ್ಯ ಎಂದೇ ಇದೆ. ಗ್ರಾಮಸ್ಥರು ಆರ್‌ಎ್ಒಗೆ ಅರ್ಜಿ ಸಲ್ಲಿಸಿ ಅವರು ಒಪ್ಪಿದರೆ ಮಾತ್ರ ಮಣ್ಣು ತೆಗೆಯಲು ಅನುಮತಿ ನೀಡಬಹುದು ಎಂದು ಸಭೆಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net