ಮಾಸಿಕ 5000 ಗೌರವ ಧನ ನೀಡಲು ಸಿಎಂಗೆ ದಳಪತಿಗಳ ಮೊರೆ

IMG-20220921-WA0026
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು/ಕಲಬುರಗಿ
ಮಾಸಿಕ 5 ಸಾವಿರ ರೂ. ಗೌರವಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಕರ್ನಾಟಕ ರಾಜ್ಯ ಪೊಲೀಸ್ ದಳಪತಿಗಳ ಸಂಘ ಸರ್ಕಾರಕ್ಕೆ ಮೊರೆಯಿಟ್ಟಿದೆ.

ಸಂಘದ ರಾಜ್ಯ ಪದಾಧಿಕಾರಿಗಳ ನಿಯೋಗ ಬುಧವಾರ ಕರ್ನಾಟಕ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ( ಕೆ ಎಸ್ಐಐಡಿಸಿ) ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿ, 40 ವರ್ಷಗಳಿಂದ ಸಮಾಜಪರ ಕೆಲಸ ಮಾಡುತ್ತಿರುವ ದಳಪತಿಗಳ ಬೇಡಿಕೆಗೆ ಕೂಡಲೇ ಸ್ಪಂದಿಸುಂತೆ ಕೋರಿದೆ.

ಹಳ್ಳಿಗಳಲ್ಲಿ ಶಾಂತಿ, ಸೌಹಾರ್ದತೆ ವಾತಾವರಣ ನಿರ್ಮಿಸುವಲ್ಲಿ ದಳಪತಿಗಳು ಮಾಡುತ್ತಿರುವ ಸೇವೆ ವಿಶಿಷ್ಟವಾಗಿದೆ. ಯಾವುದೇ ಜಾತಿ, ಮತದ ಭೇದ ಎನ್ನದೇ ದಳಪತಿಗಳು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅನೇಕ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ಒದಗಿಸಲಾಗುತ್ತಿದೆ. ಪೊಲೀಸ್ ಮತ್ತು ಜನರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಹೀಗಾಗಿ ನಮ್ಮ ಸೇವೆಗೆ ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಾಸಿಕ 5 ಸಾವಿರ ರೂ‌.ಗೌರವ ಧನ ನೀಡಬೇಕು. ಹಿಂದಿನ ಸೇವೆಯ ಪೂರ್ಣ ಪರಿಹಾರ ಕೊಡಬೇಕು. ಮೃತ ದಳಪತಿಗಳ ಕುಟುಂಬಕ್ಕೆ ಮಾಸಿಕ ಗೌರವ ಧನ ಕಲ್ಪಿಸಬೇಕು. ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ದಳಪತಿಗಳ ವಿಭಾಗಕ್ಕೆಂದೇ ರಾಜ್ಯ ಮಟ್ಟದಲ್ಲಿ ಒಬ್ಬ ಉನ್ನತ ಪೊಲೀಸ್ ಅಧಿಕಾರಿಯನ್ನು ನೇಮಿಸಬೇಕು ಎಂದು ಆಗ್ರಹಿಸಲಾಗಿದೆ.

ದೇವರಾಜು ಅರಸು ಅವರು ನಮ್ಮನ್ನು ಗ್ರಾಮ ರಕ್ಷಕದಳದ ದಳಪತಿ ಎಂದು ನೇಮಕ ಮಾಡಿ ಸೇವೆಗೆ ಗುರುತಿಸಿದ್ದಾರೆ. ಹಿಂದೆ ಗಂಗಾವತಿಯಲ್ಲಿ ಜರುಗಿದ ಬೃಹತ್ ಪ್ರತಿಭಟನೆ ವೇಳೆ ಆಗಿನ ಗೃಹ ಸಚಿವ
ಜಾಲಪ್ಪ ಅವರು ಶೀಘ್ರ ಗೌರವ ಧನ ಮಂಜೂರಿ ಮಾಡುವ ಭರವಸೆ ನೀಡಿದ್ದರು. ಆದರೆ ಈವರೆಗೆ ಜಾರಿಗೆ ಬಂದಿಲ್ಲ. ಕೋಟ್೯ ಸಹ ಗೌರವ ಧನ ನೀಡುವ ಆದೇಶ ಮಾಡಿದೆ. ಯಾವ ಸರ್ಕಾರವೂ ಇದರತ್ತ ಚಿತ್ತ ಹರಿಸಿಲ್ಲ. ತಾವಾದರೂ ಇತ್ತ ಚಿತ್ತ ಹರಿಸಿ ಎಂದು ಪ್ರಮುಖರು ಕೋರಿದರು.

ಸಂಘದ ರಾಜ್ಯಾಧ್ಯಕ್ಷ ಶರಣಬಸವನಗೌಡ ಹೊರಪೇಟಿ ಕೊಪ್ಪಳ, ಕಾರ್ಯದರ್ಶಿ ನಿಂಗಪ್ಪ ಹಳ್ಳೂರ ಬೆಳಗಾವಿ, ಉಪಾಧ್ಯಕ್ಷ ಹನುಮಂತಗೌಡ ಪಾಟೀಲ್ ಬಾಗಲಕೋಟೆ, ಕಲಬುರಗಿ ಜಿಲ್ಲಾಧ್ಯಕ್ಷ ಎ.ಜಿ.ಪಾಟೀಲ್, ಬಿಜೆಪಿ ಮುಖಂಡ ಜಗನ್ನಾಥ ಪಾಟೀಲ್ ಸಿರಕಟನಳ್ಳಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರಮುಖರು ನಿಯೋಗದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net