ಮಾಸಿಕ 15ಸಾವಿರ ಗೌರವಧನಕ್ಕೆ ಆಗ್ರಹ

Manavi
Published on

ಚಿತ್ರದುರ್ಗ: ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿ, ಮಾಸಿಕ 15ಸಾವಿರ ರೂ. ನೀಡಬೇಕು ಎಂದು ಆಗ್ರಹಿಸಿ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಸಮಿತಿ, ಎಐಯುಟಿಯುಸಿ ಕಾರ್ಯಕರ್ತೆಯರು ಸೋಮವಾರ ಪ್ರತಿಭಟನೆ ನಡೆಸಿದರು.

ಡಿಎಚ್‌ಒ ಕಚೇರಿ ಮುಂಭಾಗ ಕೆಲಕಾಲ ಪ್ರತಿಭಟಿಸಿ, ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರಗಳಿಗೆ ಒತ್ತಾಯಿಸಿ ಡಿಎಚ್‌ಒ ಡಾ.ರೇಣುಪ್ರಸಾದ್ ಅವರ ಮೂಲಕ ಮನವಿ ರವಾನಿಸಿದರು.

ಕಳೆದ ಏಳೆಂಟು ವರ್ಷದಿಂದ ಆಶಾ ಕಾರ್ಯಕರ್ತೆಯರಿಗೆ ಕೇಂದ್ರದಿಂದ ಪ್ರೋತ್ಸಾಹಧನ ನೀಡಲು ಈ ಆನ್‌ಲೈನ್ ಪೋರ್ಟಲ್‌ಗೆ ಲಿಂಕ್ ಮಾಡಲಾಗಿದೆ. ಆಗಿನಿಂದಲೂ ಬಂದಿಲ್ಲ, ಇದರಿಂದಾಗಿ ಸಾವಿರಾರು ರೂ. ಬಾಕಿ ಬರಬೇಕಿದೆ. ದುಡಿಯುವ ವರ್ಗಕ್ಕೆ ಅನ್ಯಾಯ ಮಾಡಬೇಡಿ ಎಂದು ಒತ್ತಾಯಿಸಿದರು.

ಮಾಸಿಕ ಕನಿಷ್ಠ ಗೌರವಧನ ನಿಗದಿಯಾಗದ ಹೊರತು ಆಶಾ ಕಾರ್ಯಕರ್ತೆಯರಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ. ಮಹಿಳೆಯರ ಪರವೆಂದು ಸರ್ಕಾರಗಳ ಘೋಷಣೆ ಭಾಷಣಕ್ಕೆ ಸೀಮಿತವಾಗದೆ, ನುಡಿದಂತೆ ನಡೆಯಬೇಕು ಎಂದು ಆಗ್ರಹಿಸಿದರು.

ಬಹುದಿನಗಳ ಬೇಡಿಕೆ ಈಡೇರಿಸದಿದ್ದರೆ, ಫೆ. 13, 14ರಂದು ನಡೆಯಲಿರುವ ರಾಜ್ಯಮಟ್ಟದ ಆಶಾ ಕಾರ್ಯಕರ್ತೆಯರ ವಿಧಾನಸೌಧ ಚಲೋ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ಸಂಘಟನೆಯ ಜಿಲ್ಲಾ ಉಸ್ತುವಾರಿ ರವಿಕುಮಾರ್, ಅಧ್ಯಕ್ಷೆ ಗಿರಿಜಮ್ಮ, ಕಾರ್ಯದರ್ಶಿ ಕೆ.ಶಾಂತಾ ಶೇಖರ್, ಉಪಾಧ್ಯಕ್ಷೆ ಕೆ.ಬಿ.ಮಂಜುಳಾ, ಮುಖಂಡರಾದ ಮೀನಾಕ್ಷಿ, ಕಾವೇರಿ, ಸುಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net