

ಚಿತ್ರದುರ್ಗ: ಮಾಸಿಕ 15 ಸಾವಿರ ರೂ. ಗೌರವಧನ ನಿಗದಿ ಪಡಿಸಬೇಕು ಎಂದು ಆಗ್ರಹಿಸಿ ಎಐಯುಟಿಯುಸಿ, ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಸಮಿತಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ಗೌರವಧನ ಕಡಿತ ಪಾವತಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಪಂ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.
ಆಶಾ ಕಾರ್ಯಕರ್ತೆಯರ ಸೇವೆಗಳಿಗೆ ನಿಗದಿಯಾಗಿರುವ ಕೇಂದ್ರದ ಪ್ರೋತ್ಸಾಹಧನ, ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ, ಆಶಾ ನಿಧಿ, ಕಳೆದ 3 ವರ್ಷಗಳಲ್ಲಿ ಈವರೆಗೆ ಪಾವತಿಯಾಗದ ಎಎನ್‌ಸಿ, ಪಿಎನ್‌ಸಿ, ಎಚ್‌ಬಿಎನ್‌ಸಿ, ಎಂಆರ್ 1, 2 ಪ್ರೋತ್ಸಾಹಧನ ಒಟ್ಟುಗೂಡಿಸಿ ಪಾವತಿಸಬೇಕು ಎಂದು ಆಗ್ರಹಿಸಿದರು.
2019ರಿಂದ 2021ರ ಕೋವಿಡ್-19 ಅವಧಿಯ ವಿಶೇಷ ಪ್ರೋತ್ಸಾಹಧನ, ನಾನ್-ಎಂಟಿಎಸ್ 2ಸಾವಿರ ರೂ. ಯಾರಿಗೆ ಬಂದಿಲ್ಲವೋ ಅಂತವರಿಗೆ ನೀಡಬೇಕು. ತಾಂತ್ರಿಕ ದೋಷದಿಂದ ಯಾರ‌್ಯಾರಿಗೆ ಮಾಸಿಕ ವೇತನ ಅವರೆಲ್ಲರಿಗೂ ಪಾವತಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಆಶಾ, ಸುಗಮಕಾರರನ್ನು ತಮ್ಮ ಕಾರ್ಯಕ್ಷೇತ್ರದ ಹೊರಗೆ ಮತ್ತು ನಗರ ಸರ್ವೇಗೆ, ಗೌರವಧನ ಇಲ್ಲದೆ ಪರೀಕ್ಷೆ ಹಾಗೂ ಚುನಾವಣೆಗೆ ನಿಯೋಜಿಸುವುದನ್ನು ಕೈಬಿಡಬೇಕು. 2.5 ಸಾವಿರ ಜನಸಂಖ್ಯೆಗೆ ಒಬ್ಬರನ್ನೇ ಸೀಮಿತಗೊಳಿಸಬೇಕು. ಟಿಬಿ, ಲೆಪ್ರಸಿ ಸರ್ವೇ ಪ್ರೋತ್ಸಾಹಧನ ವರ್ಷಗಟ್ಟಲೆ ನೀಡದಿರುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಆಶಾ ವಿಶ್ರಾಂತಿ ಕೊಠಡಿ ಒದಗಿಸಬೇಕು. ಆಭಾ ಕಾರ್ಡ್, ಎನ್‌ಸಿಡಿ, ಯುವಿನ್ ಆ್ಯಪ್ ಎಂಟ್ರಿ ಸೇರಿ ಇನ್ನಿತರೆ ಮೊಬೈಲ್ ಆಧಾರಿತ ಕೆಲಸ ಮಾಡಬೇಕೆಂಬ ಒತ್ತಡ ಕೈಬಿಡಬೇಕು ಎಂದು ಕೋರಿದರು.
ಮುಖಂಡರಾದ ರವಿಕುಮಾರ್, ಗಿರಿಜಮ್ಮ, ಮಂಜುಳಾ, ಗುರುಶಾಂತಾ ಸೇರಿ ನೂರಾರು ಆಶಾ ಕಾರ್ಯಕರ್ತೆಯರಿದ್ದರು.