

ಕಮಲನಗರ ಗ್ರಾಮೀಣ: ಖಾಸಗಿ ಶಾಲೆ, ಕಾಲೇಜು ಶಿಕ್ಷಕರಿಗೆ 10 ಸಾವಿರ ರೂ. ಗೌರವ ಧನ ನೀಡಲು ಆಗ್ರಹಿಸಿ ರಾಜ್ಯ ವೃತಿಪರ ಶಿಕ್ಷಣ ಪದವೀಧರ ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕರೊನಾ ಲಾಕ್ಡೌನ್ನಿಂದ ತಾಲೂಕಿನ 1500ಕ್ಕೂ ಹೆಚ್ಚು ಪದವೀಧರರು ಮತ್ತು ಅತಿಥಿ ಶಿಕ್ಷಕರು ಹಲವು ವರ್ಷದಿಂದ ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳಲ್ಲಿ ಬೋಧಿಸುತ್ತಿದ್ದಾರೆ. ಆದರೆ ದೇಶದಲ್ಲಿ ಲಾಕ್ಡೌನ್ನಿಂದ ಶಿಕ್ಷಕರಿಗೆ ಕೆಲಸ ಇಲ್ಲದೆ ಉಪಜೀವನ ನಿರ್ವಹಿಸಲು ಕಷ್ಟಕರವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕನಿಷ್ಠ 10 ಸಾವಿರ ರೂ. ಗೌರವ ಧನ ನೀಡುವಂತೆ ಮನವಿ ಮಾಡಿದರು. ಪ್ರಮುಖರಾದ ಮಹೇಂದ್ರಕುಮಾರ ಪಾಟೀಲ್ ಮಾತನಾಡಿ, ಬೀದರ್ ಜಿಲ್ಲೆಯಲ್ಲಿ 2000 ಪದವೀಧರರು ಇದ್ದು, ಕೆಲಸ ಇಲ್ಲದ ಅತಂತ್ರರಾಗಿದ್ದಾರೆ. ಈ ಶಿಕ್ಷಕರಿಗೆ ಮಾರ್ಚ್ನಿಂದ ವೇತನ ಸಿಕ್ಕಿಲ್ಲ. ಪ್ರಸಕ್ತ ಸಾಲಿನಲ್ಲಿ ಶಾಲೆ ಆರಂಭವಾಗುವ ಸಾಧ್ಯತೆ ಇಲ್ಲ. ಈ ವೇಳೆ ಖಾಸಗಿ ಶಾಲೆಗಳಿಂದ ವೇತನ ನಿರೀಕ್ಷೆ ಅಸಾಧ್ಯ ಎಂದು ಮನವರಿಕೆ ಮಾಡಿಕೊಟ್ಟರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಚವ್ಹಾಣ್, ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರ ಗಮನಕ್ಕೆ ತಂದು 10 ಸಾವಿರ ರೂ. ಗೌರವಧನ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.