

ಬೀದರ್: ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಅಂಗವಿಕಲರ ಹಾಗೂ ವಿವಿಧೋದ್ದೇಶಗಳ ಪುನರ್ವಸತಿ, ಗ್ರಾಮೀಣ ಮತ್ತು ನಗರ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ಜಿಲ್ಲಾ ಘಟಕ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿತು.
ಡಾ.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದ ಒಕ್ಕೂಟದ ಪ್ರಮುಖರು, ಕರೊನಾ ವಾರಿಯರ್ ಆಗಿರುವ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ 30 ಲಕ್ಷ ರೂ. ಮರಣ ಪರಿಹಾರ ಸರ್ಕಾರ ಘೋಷಿಸಿದೆ. ಅವರಂತೆ ವಾರಿಯರ್ ಆಗಿ ಕೆಲಸ ಮಾಡಿರುವ ಒಕ್ಕೂಟದ ಕಾರ್ಯಕರ್ತರ ಬಗ್ಗೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕೂಟದಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ತಾಲೂಕು ಅಂಗವಿಕಲರ ಅಧಿಕಾರಿ, ಗ್ರಾಮ ಮಟ್ಟದ ಅಭಿವೃದ್ಧಿ ಸಹಾಯಕ ಹಾಗೂ ನಗರ ಅಂಗವಿಕಲರ ಅಭಿವೃದ್ಧಿ ಸಹಾಯಕರ ಹುದ್ದೆಗಳನ್ನು ಸೃಷ್ಟಿಸಿ ಕಾಯಂಗೊಳಿಸಬೇಕು. ವಯೋನಿವೃತ್ತಿ ಹೊಂದುವ ನೌಕರರಿಗೆ ನಿವೃತ್ತಿ ಇಡುಗಂಟಾಗಿ 25 ಲಕ್ಷ ರೂ. ನೀಡಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಅಧ್ಯಕ್ಷ ಬಾಬುರಾವ ರಾಠೋಡ್, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಗಾರಿ, ಪ್ರಮುಖರಾದ ರಮೇಶ ಮನ್ನಾಎಖೇಳ್ಳಿ, ಬಸವರಾಜ ದೇಶಮುಖ, ಶ್ರೀನಿವಾಸ ಕ್ಯಾಸಾ, ರಾಮಕೃಷ್ಣರೆಡ್ಡಿ, ಸುನೀಲ ಚಾಂಬೋಳ, ವೈಜಿನಾಥ ಪಾಟೀಲ್, ದೇವೇಂದ್ರ ನಿಡೋದಾ, ಅರುಣಪಾಲ್, ರಮೇಶ ಸಾತೋಳಿ, ಬಸವರಾಜ ನಿರ್ಣಾ, ಬಸವರಾಜ ದಾಡಗಿ ಇತರರಿದ್ದರು.
ಅಂಗವಿಕಲರ ಅಧಿನಿಯಮ ರಾಜ್ಯ ಆಯುಕ್ತ ಹುದ್ದೆ ಅಂಗವಿಕಲರಿಗೆ ಮೀಸಲಿಡಬೇಕು. ಕರೊನಾ ವಾರಿಯರ್ಸ್ಗೆ ನೀಡುವ ಮರಣ ಪರಿಹಾರ ಜತೆಗೆ ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಕೊಡಬೇಕು. ಅಂಗವಿಕಲರ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಅಂಗವಿಕಲರ ಮಾಸಾಶನ 5 ಸಾವಿರ ರೂ.ಗೆ ಹೆಚ್ಚಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿಪತ್ರವನ್ನು ಜಿಲ್ಲಾಡಳಿತ ಮೂಲಕ ಸಿಎಂಗೆ ಸಲ್ಲಿಸಲಾಯಿತು.