ಮಾಸಾಶನ ನೆಪದಲ್ಲಿ ಕಲಾವಿದರಿಗೆ ಮೋಸ

Vijayakumar Sonare
Published on

ಬೀದರ್: ಜಿಲ್ಲೆಯ ಕಲಾವಿದರಿಗೆ ಮಾಸಾಶನ ಕೊಡಿಸುವ ನೆಪದಲ್ಲಿ ಹಣ ವಸೂಲಿ ಮಾಡುತ್ತಿರುವ ದಲ್ಲಾಳಿಗಳನ್ನು ಪತ್ತೆ ಹೆಚ್ಚಿ ಕ್ರಿಮಿನಲ್ ಕೇಸ್ ಹಾಕಲು ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾ ಸಂಚಾಲಕ ವಿಜಯಕುಮಾರ ಸೋನಾರೆ ಆಗ್ರಹಿಸಿದ್ದಾರೆ.

ಬುಧವಾರ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅವರಿಗೆ ಮನವಿಪತ್ರ ಸಲ್ಲಿಸಿದ ಅವರು, ಜಾನಪದ ಸೇರಿ ವಿವಿಧ ಕಲಾ ಪ್ರಕಾರದ ಸಾವಿರಾರು ಕಲಾವಿದರು ಜಿಲ್ಲೆಯಲ್ಲಿದ್ದಾರೆ. ಇವರಿಗೆ ಮಾಸಾಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಕೊಡಿಸುವ ನೆಪದಲ್ಲಿ ಕೆಲವರು 3-5 ಸಾವಿರ ರೂ. ವಸೂಲಿ ಮಾಡುತ್ತ ಮುಗ್ಧ ಹಾಗೂ ಬಡ ಕಲಾವಿದರಿಗೆ ಅನ್ಯಾಯ ಮಾಡುತ್ತಿರುವ ದೂರುಗಳು ಬಂದಿವೆ. ಈ ವಿಷಯ ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

ಲಾಕ್ ಡೌನ್ ನಿಂದ ನಾಲ್ಕೈದು ತಿಂಗಳಿಂದ ಸರ್ಕಾರದ ಯಾವುದೇ ಕಾರ್ಯಕ್ರಮ ಇಲ್ಲದೆ ಕಲಾವಿದರು ಕೃಷಿ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿ ಜೀವನ ನಡೆಸುತ್ತಿದ್ದಾರೆ. ಕಷ್ಟಪಟ್ಟು ದುಡಿದ ಇಲ್ಲವೇ ಸಾಲ ಮಾಡಿ ದಲ್ಲಾಳಿಗಳಿಗೆ ಹಣ ನೀಡುತ್ತಿದ್ದಾರೆ. ಇಂಥವರ ಜಾಲ ಪತ್ತೆ ಮಾಡಿ ಕಠಿಣ ಕ್ರಮ ಜರುಗಿಸಲು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಯಾರಾದರೂ ಮಾಸಾಶನ ಹಾಗೂ ಸರ್ಕಾರದ ಕಾರ್ಯಕ್ರಮ ಕೊಡಿಸುವುದಾಗಿ ಹೇಳಿ ಹಣ ಕಲಾವಿದರಿಗೆ ಕೇಳಿದರೆ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಬೇಕು. ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಕಲಾವಿದರ ಒಕ್ಕೂಟದ ಗಮನಕ್ಕೆ ತರಬೇಕು ಎಂದು ಕೋರಿದ್ದಾರೆ.

ಮಾಹಿತಿ ತಂತ್ರಜ್ಞಾನ ಯುಗದಲ್ಲಿ ನಶಿಸುತ್ತಿರುವ ಜಾನಪದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಬಡ ಕಲಾವಿದರಿಗೆ ಮಾಸಾಶನದ ಆಸೆ ತೋರಿಸಿ ಹಣ ಸುಲಿಗೆ ಮಾಡುತ್ತಿರುವ ದಲ್ಲಾಳಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.| ವಿಜಯಕುಮಾರ ಸೋನಾರೆಕಲಾವಿದರ ಒಕ್ಕೂಟದ ಜಿಲ್ಲಾ ಸಂಚಾಲಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net