ಮಾಶಾಸನ ಹೆಚ್ಚಳಗೊಳಿಸಿ

bkt-13-1
ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನ ಎದುರು ಜ್ಯೋತಿ ಜಿಲ್ಲಾಮಟ್ಟದ ಮಹಿಳಾ ಅಭಿವೃದ್ಧಿ ಸೇವಾ ಸಂಸ್ಥೆಯ ನೇತೃತ್ವದಲ್ಲಿ ಮಾಜಿ ದೇವದಾಸಿಯರು ಜಿಲ್ಲಾಡಳಿತ ಭವನ ಎದುರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
Published on

ಬಾಗಲಕೋಟೆ: ಮಾಶಾಸನ ೧೫೦೦ ರೂ. ರಿಂದ ೩ ಸಾವಿರ ರೂ. ವರೆಗೆ ಹೆಚ್ಚಳ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜ್ಯೋತಿ ಜಿಲ್ಲಾಮಟ್ಟದ ಮಹಿಳಾ ಅಭಿವೃದ್ಧಿ ಸೇವಾ ಸಂಸ್ಥೆಯ ನೇತೃತ್ವದಲ್ಲಿ ಮಾಜಿ ದೇವದಾಸಿಯರು ಜಿಲ್ಲಾಡಳಿತ ಭವನ ಎದುರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಮಾಜಿ ದೇವದಾಸಿಯರು ಅಧಿಕಾರಿಗಳು, ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಡಳಿತ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡ ಸತೀಶ ಮಾದರ ಮಾತನಾಡಿ, ದೇವದಾಸಿ ಅನಿಷ್ಠ ಪದ್ಧತಿಯಿಂದ ಸಮಾಜದಲ್ಲಿ ಸಾವಿರಾರು ಹೆಣ್ಣು ಮಕ್ಕಳ ಬಾಳು ದುರ್ಗತಿಗೆ ಸಿಲುಕಿದೆ. ಸಾಮಾನ್ಯರಂತೆ ಬದುಕು ನಡೆಸುವುದು ಕಷ್ಟಕರವಾಗಿದೆ. ಸರ್ಕಾರ ನೀಡುತ್ತಿರುವ ಮಾಶಾಸನ, ಸೌಲಭ್ಯ ಸಾಕಾಗುತ್ತಿಲ್ಲ. ಸ್ವಾವಲಂಬಿಯಾಗಿ ಬದುಕಲು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಮಾಶಾಸನವನ್ನು ೩ ಸಾವಿರಕ್ಕೆ ಹೆಚ್ಚಿಸಬೇಕು, ಡಿಬಿಡಿ ಮೂಲಕ ಮಾಶಾಸನ ಜಮೆ ಮಾಡುವುದು ಕೈ ಬಿಟ್ಟು ಆರ್‌ಟಿಜಿಎಸ್ ಮೂಲಕ ನೀಡಬೇಕು, ಮಾಜಿ ದೇವದಾಸಿಯರ ಮಹಿಳೆಯರ ಮಕ್ಕಳಿಗೆ ನೀಡುತ್ತಿರುವ ವಿವಾಹ ಪ್ರೋತ್ಸಾಹ ಧನ ದೇವದಾಸಿ ಪುನರ್ ವಸತಿ ಯೋಜನಾ ಕಚೇರಿ ಮುಖಾಂತರ ಅನುಷ್ಠಾನಗೊಳಸಿಬೇಕು, ವಿದ್ಯಾವಂತ ನಿರೋದ್ಯೋಗಿ ಮಾಜಿ ದೇವದಾಸಿ ಮಹಿಳೆಯರ ಮಕ್ಕಳಿಗೆ ರಾಜ್ಯ ಸರ್ಕಾರ ಪ್ರತಿಯೊಂದು ಹುದ್ದೆಯಲ್ಲಿ ಒಳ ಮೀಸಲಾತಿ ಕಲ್ಪಿಸಬೇಕು, ಸರ್ಕಾರ ಭೂ ಒಡೆತನ ಯೋಜನೆ ಅಡಿಯಲ್ಲಿ ವಿಶೇಷ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ಸರ್ಲಾರವು ಪ್ರಸ್ತುತ ನೀಡುತ್ತಿರುವ ಆದಾಯ ಉತ್ಪನ್ನಕರ ಚಟುವಟಿಕೆ ಯೋಜನೆ ಅಡಿಯಲ್ಲಿ ನೀಡುವಂತೆ ೩೦ ಸಾವಿರ ರೂ. ಪ್ರೋತ್ಸಾಹ ಧನ ೫೦ ಸಾವಿರಕ್ಕೆ ಹೆಚ್ಚಿಸಬೇಕು, ಸಮೀಕ್ಷೆಯಿಂದ ಹೊರಗೆ ಉಳಿದ ಮಾಜಿ ದೇವದಾಸಿಯರನ್ನು ಪುನಃ ಸೇರ್ಪಡೆಗೊಳಿಸಬೇಕು, ದೇವದಾಸಿ ಪುನವರ್ಸತಿ ಕಚೇರಿ ಬಲಪಡಿಸಬೇಕು, ನಿವೇಶನ ಇಲ್ಲದ ಮಾಜಿ ದೇವದಾಸಿಯರಿಗೆ ನಿವೇಶನ ನೀಡಬೇಕು, ಜಮೀನು ಹೊಂದಿರುವ ಮಾಜಿ ದೇವದಾಸಿಯರ ಜಮೀನುಗಳಿಗೆ ಎಸ್‌ಸಿಪಿ ಯೋಜನೆ ಅಡಿ ನೀರಾವರಿ ಸೌಲಭ್ಯ ಕಲ್ಪಿಸಬೇಕು, ಅನಿಷ್ಠ ಪದ್ಧತಿ ನಿರ್ಮೂಲನೆಗೆ ಹೆಚ್ಚು ಜಾಗೃತಿ ಕಾರ್ಯಕ್ರಮ ಮೂಡಿಸುವುದು, ದೇವದಾಸಿಯರ ಮಕ್ಕಳ ಸಮೀಕ್ಷೆ ಕೈಗೊಂಡು ಅವರಿಗೂ ಪುನರ್ ವಸತಿ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಎಂದು ಒತ್ತಾಯಿಸಿದರು.

ಗಂಗವ್ವ ಮಾದರ, ದುರುಗವ್ವ ಜಾನಮಟ್ಟಿ, ಯಲ್ಲವ್ವ ಮಾದರ, ಗ್ಯಾನವ್ವ ಚಲವಾದಿ, ಸುನಂದಾ ಕಾಂಬಳೆ, ಮಹಾದೇವಿ ಮಾದರ, ಮರದವ್ವ ಮಾದರ, ಪಕೀರವ್ವ ಮಾದರ, ರೇಣುಕಾ ಮ್ಯಾಗೇರಿ, ಸುವರ್ಣ ಹಾದಿಮನಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net