ಮಾವು, ಹಲಸು ಮೇಳಕ್ಕೆ ಜನಸ್ಪಂದನೆ

26mdk07
ಮೇಳದಲ್ಲಿ ಕಂಡುಬರುತ್ತಿರುವ ವಿವಿಧ ತಳಿಯ ಮಾವಿನ ಹಣ್ಣುಗಳು
Published on

ಮಡಿಕೇರಿ: ಕಾಫಿ ನಾಡು ಕೊಡಗಿನ ಮಡಿಕೇರಿಯಲ್ಲಿ ಶುಕ್ರವಾರ (ಮೇ 26) ಆರಂಭವಾದ ರಾಸಾಯನಿಕ ಮುಕ್ತ ಮಾವು ಮತ್ತು ಹಲಸು ಮೇಳ ಸ್ಥಳೀಯರು ಮಾತ್ರವಲ್ಲದೆ ಪ್ರವಾಸಿಗರನ್ನೂ ಸೆಳೆಯುತ್ತಿದೆ.
ಸುಮಾರು 18 ಬಗೆಯ ಮಾವು, ನಾಲ್ಕಕ್ಕೂ ಹೆಚ್ಚು ತಳಿಯ ಹಲಸು ಹಾಗೂ ಇವೆರಡು ಹಣ್ಣುಗಳ ಉಪ ಉತ್ಪನ್ನಗಳು, ಗಿಡಗಳು ಇನ್ನೂ 2 ದಿನ ಗ್ರಾಹಕರಿಗೆ ಒಂದೇ ಸೂರಿನ ಕೆಳಗೆ ಸಿಗಲಿವೆ. ಸ್ಥಳದಲ್ಲೇ ಸ್ವಾದ ಸವಿಯುವುದರ ಜತೆಗೆ ರಾಸಾಯನಿಕ ಮುಕ್ತ ಹಣ್ಣುಗಳನ್ನು ಖರೀದಿಸಬಹುದಾಗಿದೆ.
ಮಡಿಕೇರಿ ಹಾಪ್‌ಕಾಮ್ಸ್ ಆವರಣದ ಸುತ್ತಲೂ ಈಗ ಮಾವು ಮತ್ತು ಹಲಸಿನ ಪರಿಮಳ ಘಮಘಮಿಸುತ್ತಿದೆ. ಕಳೆದ ವರ್ಷದ ಯಶಸ್ಸಿನಿಂದ ಇದೀಗ ಇಲ್ಲಿ 2ನೇ ಬಾರಿಗೆ ಮಾವು ಮತ್ತು ಹಲಸು ಮೇಳ ಆಯೋಜಿಸಲಾಗಿದೆ. ಸೀಮಿತ ಋತುವಿನಲ್ಲಿ ಸಿಗುವ ಮಾವು ಮತ್ತು ಹಲಸಿನ ವಿವಿಧ ತಳಿಗಳನ್ನು ಗ್ರಾಹಕರಿಗೆ ಪರಿಚಯಿಸುವುದರ ಜತೆಗೆ ಗುಣಮಟ್ಟದ ಮಾವು ಮತ್ತು ಹಲಸನ್ನು ಗ್ರಾಹಕರಿಗೆ ಒದಗಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಮೇಳದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸುವ ಬೆಳೆಗಾರರಿಗೂ ನಷ್ಟವಾಗದೆ, ಗ್ರಾಹಕರಿಗೂ ಹೊರೆಯಾಗದ ರೀತಿಯಲ್ಲಿ ದರ ನಿಗದಿ ಮಾಡಲಾಗಿದೆ.
ರಾಮನಗರ ಜಿಲ್ಲೆಯ ಮಾವು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಮಳಿಗೆ ತೆರೆದಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು ಜಿಲ್ಲೆಯ ಮಾವು ಬೆಳೆಗಾರರೂ ಇದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಿರುವ ಹಲಸು ಬೆಳೆಗಾರರು ಮತ್ತು ಹಲಸಿನ ಹಣ್ಣಿನ ಉಪ ಉತ್ಪನ್ನಗಳ ತಯಾರಕರ ಮಳಿಗೆಗಳು ಕೂಡ ಮೇಳದಲ್ಲಿವೆ.
ಶುಕ್ರವಾರ ಮಡಿಕೇರಿ ಸಂತೆ ದಿನವಾದ ಹಿನ್ನೆಲೆಯಲ್ಲಿ ಸ್ಥಳೀಯರು ಮತ್ತು ಸುತ್ತಮುತ್ತಲಿನ ಊರುಗಳಿಂದ ಆಗಮಿಸಿದ್ದವರು ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ವಿವಿಧ ತಳಿಯ ಮಾವುಗಳನ್ನು ಮಳಿಗೆಗಳಲ್ಲಿ ನೋಡಿ ಆಸಕ್ತಿಯಿಂದ ವಿಚಾರಿಸುವುದು ಸಾಮಾನ್ಯವಾಗಿತ್ತು. ಗಿಡದ ಲಭ್ಯತೆ ಬಗ್ಗೆಯೂ ಬೆಳೆಗಾರರನ್ನು ಪ್ರಶ್ನಿಸಿ ಕುತೂಹಲ ತಣಿಸಿಕೊಳ್ಳುತ್ತಿದ್ದರು. ಕೆ.ಜಿ.ಗೆ 50 ರೂ.ನಿಂದ 250 ರೂ. ತನಕದ ಮಾವಿನ ಹಣ್ಣುಗಳು ಇಲ್ಲಿ ಮಾರಾಟವಾಗುತ್ತಿವೆ.
ದಕ್ಷಿಣ ಕನ್ನಡದಿಂದ ಆಗಮಿಸಿರುವ ಹಲಸು ಬೆಳೆಗಾರರು ವಿವಿಧ ತಳಿಯ ಹಲಸಿನ ಹಣ್ಣುಗಳನ್ನು ಮಾರುದ್ದಾರೆ. ಹಲಸಿನ ಹಣ್ಣಿನ ಗಿಡಗಳೂ ಇಲ್ಲಿ ಸಿಗುತ್ತಿವೆ. ಪ್ರವಾಸಿ ಸೀಸನ್ ಆಗಿರುವ ಈ ಅವಧಿಯಲ್ಲಿ ಕೊಡಗಿನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ವಾರಾಂತ್ಯ ಹಿನ್ನೆಲೆಯಲ್ಲಿ ಶುಕ್ರವಾರದಿಂದಲೇ ಮಡಿಕೇರಿಯತ್ತ ಪ್ರವಾಸಿಗರು ಹರಿದು ಬರುತ್ತಿದ್ದಾರೆ. ಶನಿವಾರ, ಭಾನುವಾರ ಈ ಸಂಖ್ಯೆ ಮತ್ತಷ್ಟು ಅಧಿಕವಾಗಲಿದ್ದು, ಮಾವು ಮತ್ತು ಹಲಸಿನ ಮೇಳ ಪ್ರವಾಸಿಗರಿಂದ ಮತ್ತಷ್ಟು ಕಳೆಗಟ್ಟಲಿದೆ.
ಬಗೆ ಬಗೆಯ ಹಲಸು ಉತ್ಪನ್ನಗಳು: ಬಂಟ್ವಾಳ ತಾಲೂಕು ವಿಟ್ಲದ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪನಿ ಮಳಿಗೆ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಇಲ್ಲಿ ಹಲಸಿನ ಹಣ್ಣಿನ ಉಪ ಉತ್ಪನ್ನಗಳ ಮಾರಾಟ ನಡೆಯುತ್ತಿದ್ದು, ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ. ಹಲಸಿನ ಹಣ್ಣಿನ ಹಪ್ಪಳ, ಜಾಕ್ ಬಾರ್, ಹಲ್ವಾ, ಸಾಂಬಾರ್‌ಗೆ ಬಳಸಬಹುದಾದ ಹಲಸಿನ ಕಾಯಿಯ ಸಂಸ್ಕರಿತ ಸೋಳೆ, ಹಲಸಿನ ಹಣ್ಣಿನ ಫಿಂಗರ್ ಚಿಪ್ಸ್, ಹಲಸಿನ ಉಂಡೆ, ಅಡಕೆಯ ಚಾಕ್ಲೇಟ್ ಹೀಗೆ ವೈವಿಧ್ಯಮಯ ಉತ್ಪನ್ನಗಳನ್ನು ಮಳಿಗೆಯಲ್ಲಿ ಕಾಣಬಹುದು. ದಕ್ಷಿಣಕನ್ನಡದವರೇ ತಯಾರಿಸಿದ ಹಲಸಿನ ಬೀಜದ ಚಪಾತಿ ಪುಡಿ, ಹಲಸಿನ ಬೀಜದ ಕುಕ್ಕೀಸ್, ಎನರ್ಜಿ ಡ್ರಿಂಕ್ ಪುಡಿ, ಹಲಸಿನ ಬೀಜದ ಹಪ್ಪಳವೂ ಮತ್ತೊಂದು ಮಳಿಗೆಯಲ್ಲಿ ಸಿಗುತ್ತಿದೆ.

18 ತಳಿಗಳು ಲಭ್ಯ: ಮೇಳದಲ್ಲಿ ಮಲ್ಗೊವಾ, ಆಲ್ಫಾನ್ಸೋ, ರಸಪುರಿ, ಮಲ್ಲಿಕಾ, ಸಿಂಧೂರಿ, ಬಾಗೆಪಲ್ಲಿ, ತೋತಾಪುರಿ, ಕೇಸರ್, ಸುಗರ್ ಬೇಬಿ, ಕಲಪಾಡಿ, ಆಮ್ರಪಾಲಿ, ದಶೇರಿ, ಇಮಾಮ್ ಪಸಂದ್, ನೀಲಮ್, ಕೋಲ್ಕತ್ತಾ ಗೋಲ್ಡ್, ವಲಜಾ, ರೋಮಾನಿ, ಕರ್‌ಸಿರಿ ಹೀಗೆ ಒಂದೊಂದು 200 ಗ್ರಾಂನಿಂದ 1 ಕೆಜಿಗೂ ಅಧಿಕ ತೂಕದ ಮಾವಿನ ಹಣ್ಣುಗಳನ್ನು ಈ ಮೇಳದಲ್ಲಿ ಸಿಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net