ಮಾವು ಬಂಪರ್ ಇಳುವರಿ ನಿರೀಕ್ಷೆ

Mavu-2
Published on

ಬೀದರ್: ಹಣ್ಣುಗಳ ರಾಜ ಎಂದೇ ಖ್ಯಾತಿ ಹೊಂದಿರುವ ಮಾವು ಪ್ರಸಕ್ತ ವರ್ಷ ಭರ್ಜರಿ ಇಳುವರಿ ಸಾಧ್ಯತೆಗಳಿವೆ. ಜಿಲ್ಲಾದ್ಯಂತ ಮಾವಿನ ಗಿಡಗಳು ಸಮೃದ್ಧವಾಗಿ ಹೂವು ಬಿಟ್ಟಿವೆ. ಹೂ ಭಾರದಲ್ಲಿ ಸುವಾಸನೆ ಬೀರುತ್ತಿರುವ ಮೈದುಂಬಿಕೊಂಡ ಮಾವಿನ ಗಿಡಗಳು ಜನರ ಗಮನ ಸೆಳೆಯುತ್ತಿವೆ.

ಪ್ರಸಕ್ತ ವರ್ಷ ಜಿಲ್ಲಾದ್ಯಂತ ಉತ್ತಮವಾಗಿ ಮಳೆ ಬಿದ್ದಿದೆ. ಅಷ್ಟೇ ಅಲ್ಲದೆ ಕಳೆದ ಅಕ್ಟೋಬರ್ ನಲ್ಲಿ ವಾಯುಭಾರ ಕುಸಿತದಿಂದಾಗಿ ಹಲವೆಡೆ ಮಳೆಯಾಗಿದೆ. ಈ ನಡುವೆ ಹಲವು ದಿನಗಳ ಕಾಲ ಮೋಡಕವಿದ ವಾತಾವರಣ ಇತ್ತು. ಈ ಬಾರಿ ಬಿಸಿಲು ಹಾಗೂ ಮಂಜು ಬೀಳುವ ಪ್ರಮಾಣ ಕಡಿಮೆಯಾಗಿರುವ ಕಾರಣ ಮಾವು ಗಿಡಗಳಿಗೆ ಭರ್ಜರಿ ಹೂ ಬಿಟ್ಟಿವೆ. ಉತ್ತಮ ಮಳೆಯಾದ ಕಾರಣ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ಇದೊಂದು ತಿಂಗಳು ಇಬ್ಬನಿ ಬೀಳದಿದ್ದಲ್ಲಿ ಈ ಬಾರಿ ಬೆಳೆಗಾರರಿಗೆ ಮಾವು ಕೈಹಿಡಿಯಲಿದೆ.

ಜಿಲ್ಲಾದ್ಯಂತ ಒಟ್ಟು 1983 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಇದೆ. ಬೀದರ್ ತಾಲೂಕಿನಲ್ಲಿ 582, ಹುಮನಾಬಾದ್ 573, ಬಸವಕಲ್ಯಾಣ 569, ಭಾಲ್ಕಿ 198 ಹಾಗೂ ಔರಾದ್ ತಾಲೂಕಿನಲ್ಲಿ 61 ಹೆಕ್ಟೇರ್ ಭೂಮಿಯಲ್ಲಿ ಮಾವು ಇದೆ. ಬಹುತೇಕ ಕಡೆ ಮಾವಿನ ಮರದ ತುಂಬೆಲ್ಲ ಹೂವು ಬಿಟ್ಟಿದೆ. ಸಮೃದ್ಧವಾಗಿ ಬಂದ ಹೂಗಳು ಹಣ್ಣಾಗಬೇಕಾದರೆ ಇನ್ನೂ ಎರಡು ತಿಂಗಳು ಬೇಕು. ಇದೇ ರೀತಿ ಉತ್ತಮ ವಾತಾವರಣ ಇದ್ದರೆ ಭರ್ಜರಿಯಾಗಿ ಮಾವು ಇಳುವರಿ ಬರಲಿದೆ. ಜಿಲ್ಲೆಯಲ್ಲಿ ಕೇಸರ್, ದಸೆರಿ, ನೀಲಂ, ಬೆನಿಶಾನ್, ಮಲ್ಲಿಕಾ ಸೇರಿ ಇನ್ನಿತರ ತಳಿಯ ಮಾವಿನ ಮರಗಳಿವೆ.

ಮಾವಿಗೆ ಮುಂಜಾಗ್ರತೆ ವಹಿಸಿ
ಜಿಲ್ಲಾದ್ಯಂತ ಮಾವಿನ ಮರಗಳಲ್ಲಿ ಹೂ ಬಿಟ್ಟಿದ್ದು, ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಪಡೆದುಕೊಳ್ಳಬೇಕೆಂದು ತೋಟಗಾರಿಕೆ ಉಪ ನಿರ್ದೇಶಕ ವಿಶ್ವನಾಥ ಝಿಳ್ಳೆ ಸಲಹೆ ನೀಡಿದ್ದಾರೆ. ಹೂ ಗೊಂಚಲುಗಳು ವಿಕೃತವಾಗಿ, ಪೊದೆಯಂತಾಗಿ ವಿಕಾರವಾಗಿ ಕಂಡುಬಂದರೆ ಅವುಗಳನ್ನು ಮುರಿದು ಅಥವಾ ಕತ್ತರಿಸಿ ನಾಶಪಡಿಸಬೇಕು. ಅಲ್ಲದೇ ಬೋರ್ಡೋಪೇಸ್ಟ್ (ಶೇ.1ರಷ್ಟು) ಹಚ್ಚಬೇಕು. ಹೂಗಳು ಬಿಡುವ ಸಮಯದಲ್ಲಿ ಜಿಗಿಹುಳು, ಎಲೆ ತಿನ್ನುವಂಥ ಹಾಗೂ ಅಂಗಮಾರಿ ರೋಗ, ಬೂದಿ ರೋಗ ಬರುವ ಸಾಧ್ಯತೆ ಇದೆ. ಅದಕ್ಕೆ ಮುಂಜಾಗ್ರತೆ ವಹಿಸಿ 0.25 ಮಿ.ಲೀ. ಇಮಿಡಾಕ್ಲೋಪ್ರೀಡ್ 17.8% ದೊಂದಿಗೆ 3 ಗ್ರಾಂ ಕಾಪ್ರಾಆಕ್ಸಿ ಕ್ಲೋರೈಡ್ (ಸಿಒಸಿ) ಅಥವಾ 3 ಗ್ರಾಂ ವೆಟೆಬಲ್ ಸಲ್ಫರ್ ಪ್ರತಿ ಲೀಡರ್ ನೀರಿನೊಂದಿಗೆ ಬೆರೆಸಿ ಸಿಂಪಡಿಸಬೇಕು ಎಂದು ತಿಳಿಸಿದ್ದಾರೆ. ಮಾವಿನ ಬುಡ ಮತ್ತು ರೆಂಬೆ ಕೊರಕದ ಬಾಧೆ, ರಂಧ್ರದಿಂದ ಕಟ್ಟಿಗೆ ಪುಡಿ ಉದುರಿ ಬಿಳುತ್ತಿದ್ದರೆ, ಅಂಟು ಸೋರುತ್ತಿದ್ದರೆ ಇದರ ಹತೋಟಿಗೆ ಚೂಪಾದ ಉದ್ದನೆ ತಂತಿಯಿಂದ ರಂಧ್ರದೊಳಗೆ ಆಡಿಸಿ ಚುಚ್ಚಿ ಹುಳುಗಳನ್ನು ತೆಗೆದು ನಾಶಪಡಿಸಬೇಕು. ಹುಳು ಸಿಗದಿದ್ದರೆ ರಂಧ್ರದೊಳಗೆ ಕೆಳಮುಖ ಮಾಡಿ ಇನ್ನೊಂದು ರಂಧ್ರವನ್ನು ತೆಗೆದು ಅದರಲ್ಲಿ ಡೈಕ್ಲೋರೊವಾಸ್ 76ಇಸಿ ಅಥವಾ ಕೇರೋಸಿನ್ ಕೆಲವು ಹನಿಗಳನ್ನು ಸಿರಿಂಜ್ ಅಥವಾ ಲಾಳಿಕೆಯಿಂದ ಹಾಕಿ ರಂಧ್ರವನ್ನು ಕೆಸರಿನಿಂದ ಮುಚ್ಚಬೇಕು ಎಂದು ಮಾಹಿತಿ ನೀಡಿದ್ದಾರೆ.

ತಾಲೂಕುವಾರು ಪ್ರದೇಶ (ಹೆಕ್ಟೇರ್ ನಲ್ಲಿ)
ಬೀದರ್ : 582
ಹುಮನಾಬಾದ್ : 573
ಬಸವಕಲ್ಯಾಣ : 569
ಭಾಲ್ಕಿ : 198
ಔರಾದ್ : 61
ಒಟ್ಟು : 1983

ಜಿಲ್ಲಾದ್ಯಂತ ಉತ್ತಮ ಮಳೆಯಾದ ಕಾರಣ ಪ್ರಸಕ್ತ ವರ್ಷ ಮಾವು ಇಳುವರಿ ಭರ್ಜರಿ ಬರುವ ಸಾಧ್ಯತೆಯಿದೆ. ಗಿಡಗಳಿಗೆ ಸಮೃದ್ಧ ಹೂಗಳು ಬಂದಿವೆ. ವೈಜ್ಞಾನಿಕ ಪದ್ಧತಿ ಕ್ರಮ ಅನುಸರಿಸಿದರೆ ಅಧಿಕ ಇಳುವರಿ ಪಡೆಯಲು ಸಾಧ್ಯವಿದೆ. ಸೂಕ್ತ ನಿರ್ವಹಣೆ ಸೇರಿದಂತೆ ಅಗತ್ಯ ಮಾಹಿತಿಗೆ ಹಾರ್ಟಿ ಕ್ಲಿನಿಕ್ ವಿಷಯ ತಜ್ಞರನ್ನು ಸಂಪರ್ಕಿಸಬಹುದು.| ವಿಶ್ವನಾಥ ಝಿಳ್ಳೆತೋಟಗಾರಿಕೆ ಉಪ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net