ಮಾವು ಇಳುವರಿ ಭಾರೀ ಕುಸಿತ : ಈಗಿರುವುದು ಶೇ.30 ಮಾತ್ರ, ಮಳೆ, ಗಾಳಿ ಹೆಚ್ಚಾದರೆ ಅದೂ ಸಿಗಲ್ಲ, ಬಂಗಾರದ ಬೆಲೆ ಬರುವ ಸಾಧ್ಯತೆ

2
Published on

ಕಾರಂಗುಟ್ಟೆ ನಾರಾಯಣಸ್ವಾಮಿ ಕೋಲಾರ

ಜಿಲ್ಲೆಯಲ್ಲಿ ಈ ಬಾರಿ ಮಾವು ಫಸಲು ತೀರಾ ಕಡಿಮೆಯಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಶೇ.70ಕ್ಕೂ ಅಧಿಕ ಪ್ರಮಾಣದಲ್ಲಿ ಇಳುವರಿ ಕುಸಿತ ಕಂಡಿದೆ. ರಾಜ್ಯದ ಇತರ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದ್ದು, ಮುಂದಿನ ತಿಂಗಳು ಹಣ್ಣುಗಳು ಮಾರುಕಟ್ಟೆಗೆ ಬರಲಿದ್ದು, ಬೆಲೆ ದುಬಾರಿಯಾಗುವ ಸಾಧ್ಯತೆಯಿದೆ.

ಕಳೆದ ವರ್ಷ ಆಗಸ್ಟ್​ನಿಂದ ಡಿಸೆಂಬರ್​ ತನಕ ಎಡೆ ಬಿಡದೆ ಸುರಿದ ಮಳೆಯ ಪರಿಣಾಮ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದೇ ಇಂದಿನ ಈ ಪರಿಸ್ಥಿತಿಗೆ ಪ್ರಮುಖ ಕಾರಣ. ನವೆಂಬರ್​, ಡಿಸೆಂಬರ್​ನಲ್ಲಿ ಭೂಮಿಯಲ್ಲಿ ತೇವಾಂಶವಿಲ್ಲದೆ, ಬಿಸಿಲು ಚೆನ್ನಾಗಿದ್ದರೆ ಜನವರಿಯಲ್ಲಿ ಹೂವು ಚೆನ್ನಾಗಿ ಬಂದು ಮರಗಳಲ್ಲಿ ಕಾಯಿಗಳು ನಿಲ್ಲುತ್ತಿದ್ದವು. ಆದರೆ ಈ ಬಾರಿ ಹೂವು ಬಂದಾಗ, ಕಾಯಿ ಕಚ್ಚುವಾಗ ಮಳೆ, ಮಂಜು ಹೆಚ್ಚಾಗಿದ್ದರಿಂದ ಕಾಯಿಗಳ ಸಂಖ್ಯೆ ಕಡಿಮೆಯಾಗಿದೆ.

ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್​ನಲ್ಲಿ ಮಾವು ಬೆಳೆಯಲಾಗಿದೆ. ವಾರ್ಷಿಕ ಐದರಿಂದ ಏಳೂವರೆ ಲಕ್ಷ ಟನ್​ ಇಳುವರಿ ನಿರೀಕ್ಷಿಸಲಾಗುತ್ತದೆ. ಮಾವು ಮಾರಾಟಕ್ಕೆ ರಾಜ್ಯದ ದೊಡ್ಡ ಮಾರುಕಟ್ಟೆ ಎನಿಸಿರುವ ಶ್ರೀನಿವಾಸಪುರದಲ್ಲಿ ವಾರ್ಷಿಕ 75 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಯುತ್ತದೆ. ಆದರೆ ಈ ಬಾರಿ 50ರಿಂದ 60 ಸಾವಿರ ಟನ್​ ಇಳುವರಿ ಸಹ ನಿರೀಕ್ಷಿಸಲಾಗದು. ಜಿಲ್ಲೆಯಲ್ಲಿ ತೋತಾಪುರಿ ಶೇ.60, ಬಂಗಾನಪಲ್ಲಿ ಶೇ.10 ಪ್ರದೇಶದಲ್ಲಿ ಬೆಳೆಯಲಾಗಿದ್ದು, ಈ ಹಣ್ಣುಗಳು ಮೇ ಕಡೇ ವಾರದ ನಂತರ ಮಾರುಕಟ್ಟೆಗೆ ಬರುತ್ತವೆ. ಇದು ಜ್ಯೂಸ್​ಗೆ ಹೆಚ್ಚಾಗಿ ಸರಬರಾಜಾಗುತ್ತವೆ.

ಮಲ್ಲಿಕಾ, ರಸಪುರಿ, ಸಿಂಧೂರ, ಬಾದಾಮಿ, ದಶಾರಿ, ಕೇಸರ್​ ಮತ್ತಿತರ ತಳಿಗಳು ಈ ಬಾರಿ ಶೇ.10ಕ್ಕಿಂತ ಕಡಿಮೆ ಇಳುವರಿ ಇರುವುದರಿಂದ ಮಾವು ಪ್ರಿಯರು ಹಣ್ಣು ತಿನ್ನುವ ಆಸೆ ಬಿಡಬೇಕಾಗುತ್ತದೆ. ಹಣ್ಣುಗಳು ದೇಶದಲ್ಲಷ್ಟೇ ಅಲ್ಲದೆ, ಅಮೆರಿಕ, ಕೆನಡಾ, ದುಬೈ, ಯೂರೋಪ್​ಗೆ ರಫ್ತಾಗುತ್ತವೆ.

ಕಳೆದ ವರ್ಷ ಶೇ.50 ಸಲು ಬಂದಿತ್ತು. ಲಾಕ್​ಡೌನ್​ ಜತೆಗೆ ನೊಣದ ಕಾಟದಿಂದ ತೋಟಗಳಲ್ಲೇ ಹಣ್ಣುಗಳು ಕೊಳೆತುಹೋಗಿ ರೈತರು ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದರು. ಈ ಬಾರಿ ಸಲು ಕೈಕೊಟ್ಟಿದ್ದು, ನಾಲ್ಕು ಕಾಸು ನೋಡುವ ರೈತನ ಆಸೆಗೆ ತಣ್ಣೀರೆರಚುವಂತೆ ವಾತಾವರಣ ಮಾಡಿದೆ. ಇನ್ನು ಗಾಳಿ ಮಳೆ ಹೆಚ್ಚಾದರೆ ಇರುವ ಕಾಯಿಗಳೂ ಉದುರುತ್ತವೆ. ಈ ತಿಂಗಳಲ್ಲಿ ಮಳೆ ಹೆಚ್ಚಾದರೆ ಕಾಯಿಗಳು ದಪ್ಪವಾಗಿ ಇಳುವರಿ ಸ್ವಲ್ಪಮಟ್ಟಿಗೆ ಹೆಚ್ಚಾಗುತ್ತಾದರೂ, ನೀರಿನಾಂಶ ಅಧಿಕವಾಗಿ ರುಚಿ ಕಳೆದುಕೊಳ್ಳುತ್ತವೆ. ಹಾಗಾಗಿ ಮಾವು ಈ ವರ್ಷ ರೈತ, ವ್ಯಾಪಾರಿ, ಗ್ರಾಹಕರಿಗೆ ಸಿಹಿಗಿಂತ ಕಹಿಯಾಗುವ ಸಾಧ್ಯತೆ ಹೆಚ್ಚಾಗಿದೆ.

ಏ.15, 16ರಂದು ಶ್ರೀನಿವಾಸಪುರ ಸೇರಿ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದ್ದರಿಂದ ಮಾವು, ಪಪ್ಪಾಯ, ಟೊಮ್ಯಾಟೊ, ಹೂ ಸೇರಿ ಇತರ ತೋಟಗಾರಿಕೆ ಬೆಳೆಗಳು 54.60ಹೆಕ್ಟೇರ್​ನಲ್ಲಿ ಹಾನಿಗೊಳಗಾಗಿವೆ. ಸುಮಾರು 33ಲಕ್ಷದಷ್ಟು ಬೆಳೆನಷ್ಟ ಸಂಭವಿಸಿರುವ ಸಾಧ್ಯತೆಯಿದೆ. ಸರ್ಕಾರಕ್ಕೆ ಸಮೀಕ್ಷಾ ವರದಿ ಸಲ್ಲಿಸಲಾಗುವುದು ಎಂದು ತೋಟಗಾರಿಕೆ ಉಪನಿರ್ದೇಶಕಿ ಎಂ.ಗಾಯತ್ರಿ ತಿಳಿಸಿದ್ದಾರೆ.

ಮಾವು ಇಳುವರಿ ಶೇ. 30ರಿಂದ 35 ಕಡಿಮೆಯಾಗಿದೆ. ಬಾದಾಮಿ ಹೆಚ್ಚಿಗೆ ಇರುವ ರಾಮನಗರ ಮತ್ತಿತರ ಜಿಲ್ಲೆಗಳಲ್ಲಿ ಶೇ.10ರಿಂದ 20 ಇಳುವರಿ ಮಾತ್ರ ಇದೆ ಎಂಬ ಮಾಹಿತಿಯಿದೆ. ಆದರೆ ನಮ್ಮಲ್ಲಿ ತೋತಾಪುರಿ, ಬಂಗಾನಪಲ್ಲಿ ಹೆಚ್ಚಾಗಿರುವುದರಿಂದ ಸ್ವಲ್ಪ ಮಟ್ಟಿಗೆ ಕಾಯಿಗಳು ಕಚ್ಚಿಕೊಂಡಿವೆ. ಉಳಿದ ತಳಿಗಳು ಶೇ.10ರಿಂದ 20ರ ಒಳಗೇ ಕಾಯಿಗಳು ನಿಂತಿವೆ. ಇನ್ನೂ ಒಂದು ತಿಂಗಳು ಮಳೆ, ಗಾಳಿ ಕಡಿಮೆ ಇದ್ದರೆ ಇರುವ ಫಸಲನ್ನಾದರೂ ಉಳಿಸಿಕೊಳ್ಳಬಹುದು. ಎಂ.ಗಾಯತ್ರಿ, ತೋಟಗಾರಿಕೆ ಉಪನಿರ್ದೇಶಕಿ ಕೋಲಾರ ಮಾವು ಬೆಳೆಗಾರರು ಮತ್ತು ತೋಟಗಳನ್ನು ಒಪ್ಪಂದದ ಮೇರೆಗೆ ಪಡೆದುಕೊಳ್ಳುವವರು ಸತತ ಎರಡು ವರ್ಷದಿಂದ ನಷ್ಟ ಅನುಭವಿಸಿದ್ದಾರೆ. ಕಳೆದ ವರ್ಷ ಕಾಯಿ ಕೀಳುವುದಕ್ಕಿಂತ ತಿಂಗಳ ಹಿಂದೆ ಮಳೆ ಬಂದಿದ್ದರಿಂದ ಕಾಯಿಯ ಗಾತ್ರ ಹೆಚ್ಚಾಯಿತು. ಕಾಯಿಗಳಿಗೆ ಆಂತ್ರಾಕ್ನೋಸ್​(ಸಿಬ್ಬುರೋಗ)ಬಂದಿದ್ದಲ್ಲದೆ, ನೀರಿನಾಂಶ ಹೆಚ್ಚಾಗಿ ರುಚಿ ಕಡಿಮೆಯಾಗಿತ್ತು. ಕೆ.ಜಿ.ಗೆ 35ರಿಂದ 45 ರೂ.ಗೆ ಮಾರಾಟವಾಗುತ್ತಿದ್ದ ಬೇನಿಷಾ 2ರಿಂದ 12 ರೂ.ಗೆ, 14ರಿಂದ 20ರೂ.ಗೆ ಮಾರಾಟವಾಗುತ್ತಿದ್ದ ತೋತಾಪುರಿ 6.ರೂಗೆ ಮಾರಿ ನಷ್ಟಹೊಂದಿದೆವು. ಚಂದ್ರಶೇಖರ್​, ನೀಲಟೂರು, ಶ್ರೀನಿವಾಸಪುರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net