

ಚಿತ್ರದುರ್ಗ: ತಾಲೂಕಿನ ಹಿರೇಗುಂಟನೂರು ಹೋಬಳಿ ಭೀಮಸಮುದ್ರ ಮಜುರೆಯ ಬಸವಾಪುರದ ಮಾವಿನಹಳ್ಳಿ ಶ್ರೀ ಗುರು ಬಸವೇಶ್ವರ ಸ್ವಾಮಿ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಅದ್ದೂರಿಯಾಗಿ ಜರುಗಿತು.
ರಥಕ್ಕೆ ಬಾಳೆಹಣ್ಣು ಎಸೆದು ಅನೇಕರು ಭಕ್ತಿ ಸಮರ್ಪಿಸಿದರು. ರಥೋತ್ಸವದ ಅಂಗವಾಗಿ ಬಸವೇಶ್ವರ ಸ್ವಾಮಿಗೆ ಮುಂಜಾನೆ ಮಹಾ ರುದ್ರಾಭಿಷೇಕ ಸೇರಿ ಇತರೆ ಪೂಜಾ ಕೈಂಕರ್ಯಗಳು ಶಾಸ್ತ್ರೋಕ್ತವಾಗಿ ನೆರವೇರಿದವು.
ಸ್ವಾಮಿಯ ತೇರಿಗೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಬಂದಿದ್ದರು. ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ಬಸವೇಶ್ವರ ಮಹರಾಜ್ ಕೀ ಜೈ, ಶಂಭೋ ಶಂಕರ, ಹರಹರ ಮಹಾದೇವ್ ಎನ್ನುವ ಜಯಘೋಷಗಳೊಂದಿಗೆ ತೇರು ಎಳೆದರು.
ರಥೋತ್ಸವಕ್ಕೂ ಮುನ್ನ ಸ್ವಾಮಿ ಉತ್ಸವ ಮೂರ್ತಿಯನ್ನು ದೇಗುಲದ ಸಮೀಪದ ಗದ್ದಗೆ ಬಳಿ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ನಂತರ ಉತ್ಸವ ಮೂರ್ತಿಯನ್ನು ಕರೆತಂದು ಮೂರು ಬಾರಿ ಪ್ರದಕ್ಷಿಣೆ ಹಾಕಿಸಿದ ನಂತರ ರಥದಲ್ಲಿ ಕುಳ್ಳಿರಿಸಲಾಯಿತು.
ಎಡಕ್ಕೆ ತಿರುಗಿದ ಮೂರ್ತಿ: ದೇವರ ಮೂರ್ತಿ ಎಡಭಾಗಕ್ಕೆ ತಿರುಗಿರುವುದಕ್ಕೆ ರೋಚಕ ಕಥೆ ಇದೆ. ಶಿವಭಕ್ತೆಯ ಏಳು ಹಸುಗಳು ಕಳೆದುಹೋದಾಗ ಸ್ವಾಮಿ ಸನ್ನಿಧಾನಕ್ಕೆ ಬಂದು, ಹಸುಗಳು ಮರಳಿ ಮನೆಗೆ ಬಂದರೆ ಗಿಣ್ಣದಿಂದ ಎಡೆ ಸಮರ್ಪಿಸುವುದಾಗಿ ಹರಕೆ ಹೊತ್ತಳಂತೆ. ಮನೆಗೆ ಹಿಂದಿರುಗಿದಾಗ ಹಸುಗಳು ಇರುವುದನ್ನು ಕಂಡು ಆಶ್ಚರ್ಯಗೊಂಡಳು. ಆದರೆ, ಮಾಡಿಕೊಂಡಿದ್ದ ಹರಕೆಯನ್ನೇ ಮರೆತಳು. ಇತ್ತ ಬಸವೇಶ್ವರ ಸ್ವಾಮಿ ತನ್ನ ಭಕ್ತೆ ಗಿಣ್ಣ ತರುವಳು ಎಂದು ಎಡಕ್ಕೆ ತಿರುಗಿ ದಾರಿಯನ್ನೇ ಕಾಯುತ್ತ ಭಕ್ತರನ್ನು ಆಶೀರ್ವದಿಸುತ್ತಿದ್ದಾನೆ ಎನ್ನುವ ಪ್ರತೀತಿ, ನಂಬಿಕೆ ಇದೆ.
ರೋಗಕ್ಕೆ ತೀರ್ಥ ಪ್ರೋಕ್ಷಣೆ: ಪುರಾತನ ಐತಿಹ್ಯದ ಈ ಪುಣ್ಯಕ್ಷೇತ್ರಕ್ಕೆ ಹಿಂದಿನಿಂದಲೂ ಬಸವಾಪುರ ಕ್ಷೇತ್ರ ಎಂದೇ ಕರೆಯಲಾಗುತ್ತಿತ್ತು. ನಂತರ ಮಾವಿನಹಳ್ಳಿ ಬಸವೇಶ್ವರ ಎಂಬುದಾಗಿ ಬದಲಾದರೂ ಭಕ್ತರು ಬಸವಾಪುರದ ಬಸವೇಶ್ವರ ಎಂದೇ ಕರೆಯುತ್ತಾರೆ.
ಈ ಭಾಗದ ಭಕ್ತರು ತಮ್ಮ ದನಕರುಗಳಿಗೆ ರೋಗ ರುಜಿನಗಳು ಕಾಣಿಸಿಕೊಂಡ ಕೂಡಲೇ ದೇವರ ಹೆಸರೇಳಿ ಅಭಿಷೇಕ ಮಾಡಿದ ತೀರ್ಥ ಪ್ರಸಾದ ತೆಗೆದುಕೊಂಡು ಹೋಗಿ ದನಕರುಗಳಿಗೆ ಪ್ರೋಕ್ಷಿಸಿ ಪರಿಹಾರ ಕಂಡುಕೊಳ್ಳುವ ಪದ್ಧತಿ ಮತ್ತು ನಂಬಿಕೆ ಈಗಲೂ ಭಕ್ತರಲ್ಲಿದೆ.
ತಮ್ಮ ಮನೆಯ ಹಸು ಕರು ಹಾಕಿದಾಗ ಮೊದಲ ಹಾಲನ್ನು ಸ್ವಾಮಿಗೆ ಸಮರ್ಪಿಸುವ ಪರಂಪರೆಯೂ ಇದೆ.