

ಮಧುಸೂದನ ಎಚ್. ಮಾದಿನಾಳ
ಕನಕಗಿರಿ, ಮಾವಿನ ದರ ಕುಸಿತ, ರೈತ ಕಂಗಾಲು,
Kanakagiri, mango price drop, farmer's poverty,
ಕನಕಗಿರಿ: ಹಣ್ಣುಗಳ ರಾಜ ಮಾವಿಗೆ ಬೇಡಿಕೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಇದು ಬೆಳೆಗಾರನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಳೆದ ಏಪ್ರಿಲ್ ತಿಂಗಳ ಎರಡನೇ ವಾರದಲ್ಲಿ ಭಾರಿ ಪ್ರಮಾಣದಲ್ಲಿ ಬೀಸಿದ ಗಾಳಿ ಸಹಿತ ಆಲಿಕಲ್ಲು ಮಳೆಗೆ ಹಣ್ಣಾಗುವ ಮುಂಚೆ ಮಾವಿನ ಕಾಯಿ ಉದುರಿದ್ದವು. ಈಗ ದರ ಕುಸಿದಿರುವುದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ತಾಲೂಕಿನ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತದೆ. ಈ ಭಾಗದಲ್ಲಿ ನೀಲಂ, ಕೇಸರ್, ಪೂನಸ್, ಮಲ್ಲಿಕಾ ಸೇರಿ ನಾನಾ ತಳಿಯ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಇಲ್ಲಿನ ಮಾವು ಬೆಂಗಳೂರು, ಮಹಾರಾಷ್ಟ್ರ, ಗೋವಾ ಸೇರಿ ನಾನಾ ಕಡೆಗಳಿಗೆ ರಫ್ತಾಗುತ್ತದೆ. ಅತೀ ಹೆಚ್ಚು ಬಿಸಿಲು ಸಹಿತ ನಾನಾ ಕಾರಣಗಳಿಗಾಗಿ ಕಳೆದ ವರ್ಷ ಗಿಡಗಳಲ್ಲಿ ಮಾವಿನ ಇಳುವರಿ ಕಡಿಮೆಯಿತ್ತು. ಪ್ರಸಕ್ತ ವರ್ಷ ಮಾವಿನ ಗಿಡಗಳಲ್ಲಿ ಅತೀ ಹೆಚ್ಚು ಮಾವು ಬಿಟ್ಟಿದೆ. ಮಾರುಕಟ್ಟೆ ತಲುಪಿರುವ ಮಾವಿಗೆ ಆರಂಭದಿಂದಲೂ ದರ ಸಿಕ್ಕಿಲ್ಲ. ಇದೀಗ ಮಾವಿನ ಸುಗ್ಗಿ ಮುಗಿಯುವ ಹಂತಕ್ಕೆ ಬಂದಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಇದುವರೆಗೂ ಮಾವಿನ ದರ ಮಾತ್ರ ಮೇಲೆದ್ದಿಲ್ಲ. ಇದರಿಂದ ರೈತ ನಷ್ಟ ಅನುಭವಿಸುವ ಸ್ಥಿತಿ ಬಂದಿದೆ. ಮಾವಿನ ತೋಟ ಗುತ್ತಿಗೆ ಹಿಡಿದವರು ಮಾವಿನಗಿಡಗಳಲ್ಲಿನ ಫಸಲು ಕಂಡು ಈ ವರ್ಷ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿಲ್ಲ. 10 ರೂ. ಕೆಜಿಯಿಂದ ಆರಂಭವಾಗುವ ದರ ಉತ್ತಮ ತಳಿಯ ಮಾವಿಗೆ 20 ರೂ. ಮಾತ್ರ ಮಾರಾಟವಾಗುತ್ತಿದೆ.
ಗಿಡದಲ್ಲಿ ಇರುವಾಗಲೇ ಕೆಲ ತಳಿಗಳ ಮಾವಿಗೆ ಈಗಾಗಲೇ ಹುಳು ಬೀಳುತ್ತಿರುವುದರಿಂದ ಪ್ರತಿಯೊಂದು ತೋಟದಲ್ಲಿ ಕ್ವಿಂಟಾಲ್‌ಗಟ್ಟಲೇ ಹುಳು ಬಿದ್ದ ಹಣ್ಣುಗಳು ಕಣ್ಣಿಗೆ ರಾಚುತ್ತವೆ. ಇವುಗಳನ್ನು ಸಂಗ್ರಹಿಸಿ ಒಂದೆಡೆ ಹಾಕಿ ಉಳಿದಿರುವ ಕಾಯಿಗಳನ್ನಾದರೂ ಮಾರಾಟ ಮಾಡಲು ರೈತ ದಿನನಿತ್ಯ ಹರಸಾಹಸ ಪಡುತ್ತಿದ್ದಾನೆ. ಇನ್ನು ಹಣ್ಣಿನಲ್ಲಿ ಹುಳು ಕಾಣಿಸಿಕೊಂಡಿದ್ದರಿಂದ ಗ್ರಾಹಕರು ಖರೀದಿಸಲು ಹಿಂದೇಟು ಹಾಕುತ್ತಿರುವುದರಿಂದ ಮಾರುಕಟ್ಟೆಯಲ್ಲಿ ದರ ಕುಸಿತಕ್ಕೆ ಕಾರಣವೆನ್ನಲಾಗಿದೆ.
ಮಾವಿನ ಸೀಜನ್ ಮುಗಿಯುತ್ತಾ ಬಂದಿದೆ. ಆದರೆ, ಪೂನಸ್ ನಂತಹ ತಳಿಗಳ ಮಾವಿನ ಗಿಡಗಳಲ್ಲಿ ಇದೀಗ ಮತ್ತೊಂದು ಹಂತದ ಫಸಲು ಆರಂಭವಾಗಿದ್ದು, ಗಿಡದ ತುಂಬಾ ಮತ್ತೆ ಹೂ ಕಾಯಿಗಳು ಬಿಡಲಾರಂಭಿಸಿದ್ದು, ಆ ಹಣ್ಣುಗಳು ಬಿಟ್ಟ ಮೇಲಾದರೂ ಉತ್ತಮ ದರ ಸಿಕ್ಕರೆ ಖರ್ಚು ಮಾಡಿದ್ದಾದರೂ ಸಿಗುತ್ತೆ ಎನ್ನುವ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಗಿಡದಲ್ಲಿಯೇ ಕಾಯಿಗಳಿಗೆ ಹುಳು ಬಿದ್ದಿರುವುದು ಒಂದೆಡೆಯಾದರೆ, ದರ ಕುಸಿತ ಇನ್ನೊಂದು ಕಡೆ ನೋವು ನೀಡುತ್ತಿದೆ. ಈ ವರ್ಷವೂ ಮತ್ತೆ ನಷ್ಟಕ್ಕೆ ದಾರಿ ಮಾಡಿದಾಗುತ್ತದೆ. ಸರ್ಕಾರ ರೈತರ ಕಷ್ಟ ಅರಿಯಲಿ. | ಈಶಪ್ಪ ಮಾವಿನ ತೋಟ ಗುತ್ತಿಗೆ ಪಡೆದ ರೈತ ಮಳೆಯಾಗಿರುವುದರಿಂದ ಕಾಯಿಗಳಿಗೆ ಹುಳು ಬೀಳುತ್ತದೆ. ಇದರಿಂದ ಗ್ರಾಹಕರು ಮಾವಿನ ಹಣ್ಣು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಆಲಿಕಲ್ಲು ಮಳೆಗೆ ನಷ್ಟವಾದ ರೈತರಿಗೆ ಸರ್ಕಾರದಿಂದ ಪರಿಹಾರ ಒದಗಿಸಲು ವರದಿ ಸಲ್ಲಿಸಲಾಗಿದೆ. ದರ ಕುಸಿತಕ್ಕೆ ಪರಿಹಾರಕ್ಕೆ ಅವಕಾಶವಿಲ್ಲ. | ದುರ್ಗಾಪ್ರಸಾದ್ ಎಡಿ, ತೋಟಗಾರಿಕೆ ಇಲಾಖೆ ಗಂಗಾವತಿ